ವಿಮಾನ ನಿಲ್ದಾಣದಲ್ಲಿ ಬಾಂಬ್ ಭೀತಿಗೆ ಕಾರಣವಾದ ಚಿನ್ನ !

Update: 2019-07-13 17:19 GMT

ಹೊಸದಿಲ್ಲಿ, ಜು. 13: ದಿಲ್ಲಿ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಇರಿಸಲಾಗಿದ್ದ ಚಿನ್ನ ಹೊಂದಿದ ಪ್ಯಾಕೆಟ್ ಶನಿವಾರ ಬಾಂಬ್ ಭೀತಿ ಸೃಷ್ಟಿಸಿತು.

ಇಂದಿರಾಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಆಗಮನ ಪ್ರದೇಶದಲ್ಲಿರುವ ಶೌಚಾಲಯದಲ್ಲಿ ಕಪ್ಟು ಟೇಪ್ ಸುತ್ತಿದ ಪ್ಯಾಕೆಟ್ ಅನ್ನು ಕೆಲವರು ಗಮನಿಸಿದ್ದರು. ಅವರು ಬೆಳಗ್ಗೆ ಸುಮಾರು 3.30ಕ್ಕೆ ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ತಂಡ ಶ್ವಾನ ದಳದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿತು ಹಾಗೂ ಪ್ಯಾಕೆಟ್ ಬಗ್ಗೆ ಭೀತಿ ಪಡಬೇಕಾಗಿಲ್ಲ ಎಂದು ಹೇಳಿತು. ಆ ಪ್ಯಾಕೇಟ್ ಅನ್ನು ತೆರೆದಾಗ 1 ಕಿ.ಗ್ರಾಂ. ಚಿನ್ನ ಪತ್ತೆಯಾಯಿತು.

ಚಿನ್ನದ ಗಟ್ಟಿಯ ಮೌಲ್ಯ 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅದನ್ನು ಮುಂದಿನ ತನಿಖೆಗಾಗಿ ಕಸ್ಟಮ್ಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಂಡ ತಿಳಿಸಿದೆ. ವಿದೇಶದಿಂದ ಇಲ್ಲಿಗೆ ಆಗಮಿಸಿದ ಪ್ರಯಾಣಿಕರು ಅಕ್ರಮವಾಗಿ ಈ ಚಿನ್ನದ ಗಟ್ಟಿ ತಂದಿರುವ ಶಂಕೆ ಇದೆ. ಭಾರತೀಯ ಅಧಿಕಾರಿಗಳು ಪತ್ತೆ ಮಾಡಬಹುದು ಎಂಬ ಭೀತಿಯಿಂದ ಚಿನ್ನವನ್ನು ಶೌಚಾಲಯದಲ್ಲಿ ಇರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News