ಸೊಮಾಲಿಯ: ಹೊಟೇಲ್ ಮೇಲೆ ಆತ್ಮಹತ್ಯಾ ದಾಳಿ: 26 ಸಾವು

Update: 2019-07-13 19:00 GMT

ಮೊಗಾದಿಶು (ಸೊಮಾಲಿಯ), ಜು. 13: ದಕ್ಷಿಣ ಸೊಮಾಲಿಯದ ಪ್ರಸಿದ್ಧ ಹೊಟೇಲೊಂದರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಹಲವಾರು ವಿದೇಶಿಯರು ಸೇರಿದಂತೆ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ ಹಾಗೂ 56 ಮಂದಿ ಗಾಯಗೊಂಡಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ಅಲ್-ಶಬಾಬ್ ಭಯೋತ್ಪಾದಕರು ದಾಳಿಯ ಹೊಣೆಯನ್ನು ಹೊತ್ತಿದ್ದಾರೆ.

 ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದನ್ನು ಆತ್ಮಹತ್ಯಾ ಬಾಂಬರ್ ಒಬ್ಬ ಶುಕ್ರವಾರ ಬಂದರು ನಗರ ಕಿಸ್ಮಯೊದಲ್ಲಿರುವ ಮೆಡಿನಾ ಹೊಟೇಲ್‌ಗೆ ನುಗ್ಗಿಸಿದನು ಹಾಗೂ ಅದರ ಬೆನ್ನಿಗೇ ಭಾರೀ ಶಸ್ತ್ರಸಜ್ಜಿತರಾಗಿದ್ದ ಹಲವಾರು ಬಂದೂಕುಧಾರಿಗಳು ಗುಂಡು ಹಾರಿಸುತ್ತಾ ಹೊಟೇಲ್‌ಗೆ ನುಗ್ಗಿದರು ಎಂದು ಅಧಿಕಾರಿಗಳು ಹೇಳಿದರು.

 ಬಳಿಕ ಅಲ್ಲಿಗೆ ಧಾವಿಸಿದ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಎದುರಿಸಿದವು. 12 ಗಂಟೆಗಳ ಬಳಿಕ, ಅಂದರೆ ಶನಿವಾರ ಬೆಳಗ್ಗೆಯಷ್ಟೇ ಮುತ್ತಿಗೆ ಕೊನೆಗೊಂಡಿತು.

ಮೂವರು ಕೆನ್ನ ಪ್ರಜೆಗಳು, ಮೂವರು ತಾಂಝಾನಿಯ ಪ್ರಜೆಗಳು, ಇಬ್ಬರು ಅಮೆರಿಕನ್ನರು, ಓರ್ವ ಬ್ರಿಟಿಶ್ ಮತ್ತು ಓರ್ವ ಕೆನಡಿ ಪ್ರಜೆ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಜುಬಲ್ಯಾಂಡ್ ವಲಯದ ಅಧ್ಯಕ್ಷ ಅಹ್ಮದ್ ಮುಹಮ್ಮದ್ ಇಸ್ಲಾಮ್ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.

‘‘ಇಬ್ಬರು ಚೀನಿ ಪ್ರಜೆಗಳು ಗಾಯಗೊಂಡಿದ್ದಾರೆ’’ ಎಂದರು.

‘‘ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಹಾಗೂ ಎಲ್ಲ ಭಯೋತ್ಪಾದಕರನ್ನು ಕೊಲ್ಲಲಾಗಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸೊಮಾಲಿ ಪೊಲೀಸರ ಸಮವಸ್ತ್ರದಲ್ಲಿದ್ದ ನಾಲ್ವರು ಬಂದೂಕುಧಾರಿಗಳು ಹೊಟೇಲ್‌ಗೆ ನುಗ್ಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News