​ಅಸ್ಸಾಂ ಪ್ರವಾಹ ಉಲ್ಬಣ: 14 ಲಕ್ಷ ಜನ ಸಂಕಷ್ಟದಲ್ಲಿ

Update: 2019-07-14 04:34 GMT

ಗುವಾಹತಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, ಶನಿವಾರ ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ ರಾಜ್ಯದ 25 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದ್ದು, ಕಳೆದ 24 ಗಂಟೆಗಳಲ್ಲಿ 7 ಮಂದಿ ನೆರೆಗೆ ಬಲಿಯಾಗಿದ್ದಾರೆ. 14 ಲಕ್ಷ ಮಂದಿ ನೆರೆಹಾವಳಿಯಿಂದ ಬಾಧಿತರಾಗಿದ್ದಾರೆ.

ಶನಿವಾರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ್ ಜತೆ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ಕೇಂದ್ರದ ನೆರವಿನ ಭರವಸೆ ನೀಡಿದ್ದಾರೆ.

ಬ್ರಹ್ಮಪುತ್ರಾ, ಬುರ್ಹಿದಿಂಗ್, ಧನಸಿರಿ, ದೇಸಂಗ್, ಜೈಯಾ ಭರಲಿ, ಕೋಪಿಲಿ, ಪುಥಿಮಾರಿ, ಬೇಕಿ, ಕತಖಲ್ ಮತ್ತುಕುಶಿಯಾರಾ ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿವೆ.

ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಪ್ರಕಾರ 25 ಜಿಲ್ಲೆಗಳ 2168 ಗ್ರಾಮಗಳಲ್ಲಿ ಒಟ್ಟು 14,06,711 ಮಂದಿ ಸಂಕಷ್ಟದಲ್ಲಿದ್ದಾರೆ. ಕೆಳ ಅಸ್ಸಾಂನ ಬರ್ಪೇಟಾ ಮತ್ತು ಅಸ್ಸಾಂ ಮೇಲ್ಭಾಗದ ಧೇಮಜಿ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಚರಣೆಗೆ ಇಳಿದಿದೆ.

ರಾಜ್ಯಾದ್ಯಂತ 20 ಸಾವಿರಕ್ಕೂ ಹೆಚ್ಚು ಮಂದಿ 62 ನಿರಾಶ್ರಿತರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. 172 ಪರಿಹಾರ ವಿತರಣಾ ಕೇಂದ್ರಗಳ ಮೂಲಕ ಪರಿಹಾರ ಸಾಮಗ್ರಿ ವಿತರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News