ಇಮಾಮ್ ರಿಗೆ ಹಲ್ಲೆಗೈದು ‘ಜೈ ಶ್ರೀರಾಮ್’ ಘೋಷಣೆ ಕೂಗಲು ಬಲವಂತ:12 ದುಷ್ಕರ್ಮಿಗಳ ವಿರುದ್ಧ ಪ್ರಕರಣ

Update: 2019-07-14 15:32 GMT

ಬಾಗಪತ್(ಉ.ಪ್ರ),ಜು.14: ಮುಸ್ಲಿಂ ಧರ್ಮಗುರುವೋರ್ವರ ಗಡ್ಡವನ್ನು ಎಳೆದಾಡಿ ಹಲ್ಲೆಗೈದಿದ್ದಲ್ಲದೆ, ಜೈ ಶ್ರೀರಾಮ್ ಘೋಷಣೆಯನ್ನು ಕೂಗುವಂತೆ ಅವರನ್ನು ಬಲವಂತಗೊಳಿಸಿದ ಆರೋಪದಲ್ಲಿ ಇಲ್ಲಿಯ ಪೊಲೀಸರು 12 ಯುವಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮೇಲ್ನೋಟಕ್ಕೆ ಇದೊಂದು ದೈಹಿಕ ಹಲ್ಲೆ ಪ್ರಕರಣವಾಗಿರುವಂತೆ ಕಂಡು ಬರುತ್ತಿದೆ. ಆದಾಗ್ಯೂ ಇಮಾಮ್ ದೂರಿನ ಮೇರೆಗೆ 12 ಯುವಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯ ಆಧಾರದಲ್ಲಿ ಅವರ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಬಾಗಪತ್ ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮುಝಫ್ಫರ್ ನಗರ ನಿವಾಸಿಯಾಗಿರುವ ಇಮಾಮ್ ಇಮ್ಲಾಕ್-ಉರ್-ರೆಹಮಾನ್ ಅವರು ಶನಿವಾರ ತನ್ನ ಬೈಕ್‌ ನಲ್ಲಿ ತನ್ನ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸುಮಾರು 12 ಯುವಕರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ ಅವರ ಗಡ್ಡವನ್ನೂ ಎಳೆದಾಡಿದ್ದಾರೆ. ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆಯೂ ತನ್ನನ್ನು ಬಲವಂತಗೊಳಿಸಲಾಗಿತ್ತು. ತಾನು ಕೂಗಿಕೊಂಡಾಗ ತನ್ನ ಗ್ರಾಮದ ಇಬ್ಬರು ವ್ಯಕ್ತಿಗಳು ತನ್ನನ್ನು ರಕ್ಷಿಸಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪಾಂಡೆ ಹೇಳಿದರು.

ಗಡ್ಡವನ್ನು ಬೋಳಿಸಿದ ನಂತರವೇ ಗ್ರಾಮಕ್ಕೆ ಬರುವಂತೆ ಯುವಕರು ತನಗೆ ಹೇಳಿದ್ದಾರೆ ಎಂದೂ ಇಮಾಮ್ ದೂರಿಕೊಂಡಿದ್ದಾರೆ.

 ಹಲ್ಲೆಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ ಎಂದ ಪಾಂಡೆ,ಇಮಾಮ್ ಅವರು ಇಂತಹುದೇ ದೂರನ್ನು ಮುಝಫ್ಫರ್ ನಗರ ಜಿಲ್ಲೆಯಲ್ಲಿ ದಾಖಲಿಸಿದ್ದರು ಮತ್ತು ಅದು ನಿಜವಾಗಿತ್ತು ಎನ್ನುವುದು ತನಿಖೆಯ ಬಳಿಕ ದೃಢಪಟ್ಟಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News