‘ರಾಷ್ಟ್ರ ವಿರೋಧಿ ಟಿಕ್ ಟಾಕ್’ ನಿಷೇಧಿಸಿ: ಆರೆಸ್ಸೆಸ್ ಅಂಗಸಂಸ್ಥೆ

Update: 2019-07-14 16:53 GMT

ಹೊಸದಿಲ್ಲಿ, ಜು. 14: ರಾಷ್ಟ್ರ ವಿರೋಧಿ ವಿಚಾರಗಳ ಜಾಲವಾಗುತ್ತಿರುವ ಚೀನಾದ ಎರಡು ಆ್ಯಪ್‌ಗಳಾದ ಟಿಕ್ ಟಾಕ್ ಹಾಗೂ ಹಲೋವನ್ನು ನಿಷೇಧಿಸುವಂತೆ ಆರೆಸ್ಸೆಸ್ ನ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದೆ.

ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸ್ವದೇಶಿ ಜಾಗರಣ್ ಮಂಚ್‌ನ ಸಂಚಾಲಕ ಅಶ್ವನಿ ಮಹಾಜನ್, ಈ ಎರಡು ಆ್ಯಪ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘‘ಇತ್ತೀಚೆಗಿನ ದಿನಗಳಲ್ಲಿ ಟಿಕ್ ಟಾಕ್ ರಾಷ್ಟ್ರ ವಿರೋಧಿ ಅಂಶಗಳ ಜಾಲವಾಗುತ್ತಿದೆ. ಈ ಆ್ಯಪ್ ವ್ಯಾಪಕವಾಗಿ ಶೇರ್ ಆಗುತ್ತಿದೆ. ಇದು ನಮ್ಮ ಸಮಾಜದ ವಿನ್ಯಾಸವನ್ನು ಛಿದ್ರಗೊಳಿಸುವ ಸಾಧ್ಯತೆ ಇದೆ’’ ಎಂದು ಮಹಾಜನ್ ಪತ್ರದಲ್ಲಿ ಹೇಳಿದ್ದಾರೆ.

 ‘ಹಲೋ’ ಬಗ್ಗೆ ಪ್ರತಿಕ್ರಿಯಿಸಿರುವ ಮಹಾಜನ್, ಇತರ ಸಾಮಾಜಿಕ ಜಾಲ ತಾಣದಲ್ಲಿ 11 ಸಾವಿರಕ್ಕೂ ಅಧಿಕ ತಿರುಚಿದ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಲು ‘ಹಲೋ’ 7 ಕೋಟಿ ರೂಪಾಯಿ ಪಡೆದಿದೆ ಎಂದು ಆರೋಪಿಸಿದ್ದಾರೆ. ಇದರ ಕೆಲವು ಜಾಹೀರಾತುಗಳಲ್ಲಿ ಭಾರತದ ಹಿರಿಯ ರಾಜಕೀಯ ನಾಯಕರ ತಿರುಚಿದ ಚಿತ್ರಗಳನ್ನು ಬಳಸಲಾಗಿದೆ. ಸಾರ್ವತ್ರಿಕ ಚುನಾವಣೆ ಸಂದರ್ಭ ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಜೆಪಿಯ ಪದಾಧಿಕಾರಿಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ‘ಟಿಕ್ ಟಾಕ್’ ಹಾಗೂ ‘ಹಲೋ’ ಸಹಿತ ಚೀನಾದ ಎಲ್ಲ ಆ್ಯಪ್‌ಗಳನ್ನು ನಿಷೇಧಿಸುವಂತೆ ಗೃಹ ಸಚಿವಾಲಯವನ್ನು ಆಗ್ರಹಿಸಿರುವ ಮಹಾಜನ್, ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಸಂಬಂಧಿಸಿ ಋಣಾತ್ಮಕ ಉದ್ದೇಶವನ್ನು ಚೀನಾ ಸಂಸ್ಥೆಯ ಕೆಲವು ವಿಭಾಗಗಳು ಹೊಂದಿವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News