ಕೇಂದ್ರ ಸರಕಾರದ 2 ಪ್ರಮುಖ ಯೋಜನೆಗಳು ನನ್ನ ಪರಿಕಲ್ಪನೆಗಳು: ಯಶವಂತ್ ಸಿನ್ಹಾ ಆಕ್ರೋಶ

Update: 2019-07-14 16:54 GMT

ಹೊಸದಿಲ್ಲಿ,ಜು.14: ಎನ್‌ಡಿಎ ಸರಕಾರದ ಮುಂಚೂಣಿಯ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎನ್‌ಎಚ್‌ಡಿಪಿ) ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್‌ಯೋಜನಾ (ಪಿಎಂಜಿಎಸ್‌ವೈ) ತನ್ನ ಪರಿಕಲ್ಪನೆಗಳಾಗಿದ್ದವು ಎಂದು ಹೇಳಿರುವ ಯಶವಂತ್ ಸಿನ್ಹಾ,ಇವುಗಳ ಹೆಗ್ಗಳಿಕೆಯನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಿರುವುದಕ್ಕಾಗಿ ತಮ್ಮ ಆಗಿನ ಸಹೋದ್ಯೋಗಿಗಳನ್ನು ಟೀಕಿಸಿದ್ದಾರೆ.

ರಾಜತಾಂತ್ರಿಕ ಪರಿವರ್ತಿತ ರಾಜಕಾರಣಿ ಸಿನ್ಹಾ 1998-2004ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ವಿತ್ತ ಮತ್ತು ವಿದೇಶಾಂಗ ವ್ಯವಹಾರಗಳ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದರು. 1990-91ರ ಅಲ್ಪಾವಧಿಗೆ ಮಾಜಿ ಪ್ರಧಾನಿ ಚಂದ್ರಶೇಖರ ಅವರ ಸಂಪುಟದಲ್ಲಿ ವಿತ್ತಸಚಿವರಾಗಿಯೂ ಸಿನ್ಹಾ ಕರ್ತವ್ಯ ನಿರ್ವಹಿಸಿದ್ದರು. ‘‘ಎನ್‌ಎಚ್‌ಡಿಪಿ ಸಂಪೂರ್ಣವಾಗಿ ನನ್ನದೇ ಪರಿಕಲ್ಪನೆಯಾಗಿತ್ತು. ನನ್ನ ಮಟ್ಟಿಗೆ ಅದು (ಎನ್‌ಎಚ್‌ಡಿಪಿ) ಹೊಸ ಚಿಂತನೆಯೇನೂ ಆಗಿರಲಿಲ್ಲ. 1970ರ ದಶಕದಲ್ಲಿ ಜರ್ಮನಿಯಲ್ಲಿ ನಿಯೋಜನೆಗೊಂಡಾಗಿನಿಂದಲೇ ಅದನ್ನು ನಾನು ಪೋಷಿಸಿಕೊಂಡು ಬಂದಿದ್ದೆ. ಜರ್ಮನಿಯು ತನ್ನ ಹೆದ್ದಾರಿ ವ್ಯವಸ್ಥೆಗಾಗಿ ಪ್ರಸಿದ್ಧವಾಗಿದೆ ’’ಎಂದು ಸಿನ್ಹಾ ಇತ್ತೀಚಿಗೆ ಬಿಡುಗಡೆಗೊಂಡಿರುವ ತನ್ನ ಆತ್ಮಚರಿತ್ರೆ ‘ರೆಲೆಂಟ್‌ಲೆಸ್’ನಲ್ಲಿ ಬರೆದಿದ್ದಾರೆ.

ತನಗೆ ಅವಕಾಶ ಸಿಕ್ಕಿದಾಗ ಇಂತಹುದೇ ಹೆದ್ದಾರಿಗಳನ್ನು ಭಾರತದಲ್ಲಿ ಅಸ್ತಿತ್ವಕ್ಕೆ ತರಲು ತಾನು ಅಂದೇ ನಿರ್ಧರಿಸಿದ್ದೆ ಎಂದು ಅವರು ಹೇಳಿದ್ದಾರೆ.

 ಪಿಎಂಜಿಎಸ್‌ವೈ ಕೂಡ ತನ್ನದೇ ಪರಿಕಲ್ಪನೆಯಾಗಿತ್ತೆಂದು ಹೇಳಿಕೊಂಡಿರುವ ಸಿನ್ಹಾ, ತಾನು ವಾಜಪೇಯಿಯವರನ್ನು ಭೇಟಿಯಾದಾಗ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕಾಗಿ ಹೊಸ ಯೋಜನೆಯೊಂದನ್ನು ಆರಂಭಿಸುವಂತೆ ಮತ್ತು ಅದಕ್ಕಾಗಿ ಪ್ರತ್ಯೇಕ ನಿಧಿಯನ್ನು ಒದಗಿಸುವಂತೆ ತಾನೇ ಮೊದಲು ಸೂಚಿಸಿದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News