​ಚಂದ್ರಯಾನ-2 ಹಠಾತ್ ರದ್ದು: ಕಾರಣ ಏನು ಗೊತ್ತೇ ?

Update: 2019-07-15 03:37 GMT

ಶ್ರೀಹರಿಕೋಟಾ: ಇಡೀ ವಿಶ್ವವೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2 ಮಿಷನ್ ತಾಂತ್ರಿಕ ಅಡಚಣೆಯಿಂದಾಗಿ ಉಡಾವಣೆಗೆ ಕೆಲವೇ ನಿಮಿಷ ಮುನ್ನ ದಿಢೀರನೆ ರದ್ದಾಗಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ 2.51ಕ್ಕೆ ಚಂದ್ರಯಾನ-2 ಉಡಾವಣೆಗೆ ಸಕಲ ಸಿದ್ಧತೆ ನಡೆದಿತ್ತು. ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಿಷನ್ ನಿಯಂತ್ರಣ ಕೊಠಡಿಯಿಂದ ಮಿಷನ್ ರದ್ದಾದ ಘೋಷಣೆ ಮಾಡಿತು. ಇದು ದೇಶ ವಿದೇಶಗಳಿಂದ ಆಗಮಿಸಿದ್ದ ಪತ್ರಕರ್ತರ ನಿರಾಸೆಗೆ ಕಾರಣವಾಗಿ ಮಾಧ್ಯಮ ಗ್ಯಾಲರಿಯಲ್ಲಿ ಗದ್ದಲ ಉಂಟಾಯಿತು.

ಉಡಾವಣೆಗೆ 56 ನಿಮಿಷ ಬಾಕಿ ಇದ್ದಾಗ ಲಾಂಚ್ ವೆಹಿಕಲ್ ಸಿಸ್ಟಂನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಉಡಾವಣೆಯನ್ನು ಇಂದು ರದ್ದುಪಡಿಸಲಾಗಿದೆ. ಪರಿಷ್ಕೃತ ಉಡಾವಣಾ ದಿನಾಂಕವನ್ನು ಬಳಿಕ ಪ್ರಕಟಿಸುವುದಾಗಿ ಇಸ್ರೋ ವಕ್ತಾರರು ಹೇಳಿಕೆ ನೀಡಿದರು.

ಚಂದ್ರಯಾನ-2 ಮತ್ತು ಲೂನಾರ್ ಕ್ರಾಫ್ಟ್‌ಗಳನ್ನು ಜಿಎಸ್‌ಎಲ್‌ವಿ ಎಂಕೆ3 ಉಡಾಯಿಸಿ, ನಿಗದಿಯಂತೆ ಸೆಪ್ಟೆಂಬರ್ 6-7ಕ್ಕೆ ಚಂದ್ರನ ಅಂಗಳದಲ್ಲಿ ಉಳಿದಿದ್ದರೆ, ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮುತ್ತಿತ್ತು.

ಚಂದ್ರಯಾನ-2 ಉಡಾವಣೆ ವೀಕ್ಷಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಶ್ರೀಹರಿಕೋಟಾಗೆ ಆಗಮಿಸಿದ್ದರು. ಇದೀಗ ಉಡಾವಣೆ ಮುಂದೂಡಿಕೆ ಇಸ್ರೊಗೆ ಭಾರಿ ಹಿನ್ನಡೆಯಾಗಿದೆ. ಈಗಾಗಲೇ ಮಿಷನ್‌ಗೆ 1000 ಕೋಟಿ ರೂ. ವೆಚ್ಚ ಮಾಡಿದ ಹಿನ್ನೆಲೆಯಲ್ಲಿ ಮತ್ತು ಹಲವಾರು ವರ್ಷಗಳ ಶ್ರಮ ಹಾಕಿರುವ ಹಿನ್ನೆಲೆಯಲ್ಲಿ ತಕ್ಷಣ ಉಡಾವಣೆಯ ಸಾಹಸಕ್ಕೆ ಇಸ್ರೋ ಕೈಹಾಕಲಿಲ್ಲ. ತಾಂತ್ರಿಕ ತೊಂದರೆಯ ನಿಖರ ಕಾರಣ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಮುಂದಿನ ಉಡಾವಣೆ ದಿನಾಂಕದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News