ಸ್ವದೇಶಕ್ಕೆ ವಾಪಸಾಗುವ ಆಸೆಯೇ ತೊರೆದಿದ್ದೆವು: ಸಂತ್ರಸ್ತ ಅಭಿಷೇಕ್ ಬಡಾಜೆ

Update: 2019-07-15 07:04 GMT
ಅಭಿಷೇಕ್ ಬಡಾಜೆ

ಮಂಗಳೂರು, ಜು.15: ಕುವೈತ್‌ನಲ್ಲಿ ಉದ್ಯೋಗ ಕೊಡುವುದಾಗಿ ವಂಚಿಸಿದ ಕಂಪೆನಿಯು ನಮ್ಮನ್ನು ನರಕದ ಕೂಪಕ್ಕೆ ತಳ್ಳಿತ್ತು. ಇಂತಹ ಅತಂತ್ರ ಸ್ಥಿತಿಯಲ್ಲಿದ್ದಾಗ ಭಾರತಕ್ಕೆ ಮರಳುವ ಆಸೆಯೇ ಕಮರಿ ಹೋಗಿತ್ತು.

ಇದು, ಕುವೈತ್‌ನ ಸಂಕಷ್ಟದಿಂದ ಪಾರಾಗಿ ಬಂದ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಬಡಾಜೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ಭಾವನಾತ್ಮಕವಾಗಿ ತಮ್ಮ ಅಳಲು ತೋಡಿಕೊಂಡರು.

‘ಕುವೈತ್‌ಗೆ ತೆರಳಿದ ಕೂಡಲೇ ನಮಗೆ ಕಂಪೆನಿಯು ಕೆಲಸ ನೀಡಿಲ್ಲ. ಹಲವು ದಿನಗಳ ಕಾಲ ರೂಮಿನಲ್ಲೇ ಕುಳಿತುಕೊಳ್ಳುವಂತಾಗಿತ್ತು. ಸ್ವಲ್ಪ ದಿನಗಳ ಬಳಿಕ ಕಂಪೆನಿಯು ಸಂತ್ರಸ್ತರಿಗೆ ಊಟ-ಉಪಾಹಾರ ನೀಡುವುದನ್ನೂ ತಡೆ ಹಿಡಿದಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉಪವಾಸವೇ ನಮ್ಮ ಆಹಾರವಾಗಿತ್ತು. ನೀರಿಗೂ ಪರಿಪರಿ ಯಾಚಿಸುವ ದುಃಸ್ಥಿತಿ ನಿರ್ಮಾಣವಾಗಿತ್ತು’ ಎಂದು ಅಭಿಷೇಕ್ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು

‘ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಮ್ಯಾನ್ ಪವರ್ ಕನ್ಸಲ್‌ಟೆನ್ಸಿ ಸಂಸ್ಥೆಯು ಕರಾವಳಿಯ 34 ಮಂದಿ ಸೇರಿದಂತೆ ಒಟ್ಟು 58 ಮಂದಿಯನ್ನು ಉದ್ಯೋಗ ನಿಮಿತ್ತ ಮುಂಬೈನ ಜುಹು ಚರ್ಚ್ ರಸ್ತೆಯ ಹಾಕ್ ಕನ್ಸಲ್‌ಟೆನ್ಸಿ ಪ್ರೈ.ಲಿ. ಸಂಸ್ಥೆಗೆ ಕಳುಹಿಸಿಕೊಟ್ಟಿತ್ತು. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ 65 ಸಾವಿರ ರೂ.ನ್ನು ಕಂಪೆನಿಗೆ ಪಾವತಿಸಿದ್ದೇವು. ಅಲ್ಲಿಂದ ಜ. 7ರಂದು ಕುವೈತ್‌ಗೆ ತೆರಳಿದ್ದೇವು’ ಎಂದರು.

ಕುವೈತ್‌ಗೆ ತೆರಳಿದ 2-3 ತಿಂಗಳುಗಳ ಕಾಲ ಯಾವುದೇ ಕೆಲಸವಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದೇವು. ವಿದೇಶದಲ್ಲಿ ಉದ್ಯೋಗ ಮಾಡಲು ಕೆಲವು ಪ್ರಮಾಣಪತ್ರಗಳ ಅಗತ್ಯವಿತ್ತು. ಸ್ಥಳೀಯ ಸಿವಿಲ್ ಐಡಿ, ಲೈಸೆನ್ಸ್, ಬೆರಳಚ್ಚು ಪ್ರಕ್ರಿಯೆ ನಡೆಸಬೇಕಾಗಿದ್ದರಿಂದ ಕುವೈತ್‌ನಲ್ಲಿ ಉದ್ಯೋಗವು ಮರುಭೂಮಿಯ ಓಯಸಿಸ್‌ನಂತೆ ಭಾಸವಾಗುತ್ತಿತ್ತು ಎಂದು ಹೇಳಿದರು.

ನನಗೆ ಬೈಕ್ ರೈಡರ್ ಉದ್ಯೋಗ ಕೊಡುವುದಾಗಿ ಕಂಪೆನಿ ಭರವಸೆ ನೀಡಿತ್ತು. ಆದರೆ ಅಲ್ಲಿ ಬೈಕ್ ರೈಡರ್ ಕೆಲಸವಿರಲಿಲ್ಲ. ಇಲೆಕ್ಟ್ರಿಕಲ್ಸ್, ಮೆಕ್ಯಾನಿಕ್‌ನಂತಹ ಬೇರೆ ಬೇರೆ ಕೆಲಸ ಮಾಡಲು ಒತ್ತಾಯಿಸಿತ್ತು. ನಮಗೆ ಅನ್ಯ ಉದ್ಯೋಗದ ಕೌಶಲ್ಯಗಳು ತಿಳಿದಿರಲಿಲ್ಲ. 58 ಸಂತ್ರಸ್ತರ ಪೈಕಿ ಎಂಟು ಮಂದಿಗೆ ಮಾತ್ರ ಅಲ್ಲಿನ ಕಂಪೆನಿಯು ಕೆಲಸ ನೀಡಿತ್ತು ಎಂದು ಮಂಜೇಶ್ವರದ ಅಭಿಷೇಕ್ ಬಡಾಜೆ ವಿವರಿಸಿದರು.

ಕುವೈತ್‌ನಲ್ಲಿ ನಮಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ ಕಂಪೆನಿಯಿಂದ ವಂಚನೆಗೊಳಗಾಗಿದ್ದು ನಮಗೆ ತಿಳಿಯುವಷ್ಟರಲ್ಲಿ ಸಮಯ ಮಿಂಚಿ ಹೋಗಿತ್ತು. ಅಲ್ಲಿಂದ ಭಾರತಕ್ಕೆ ವಾಪಸಾಗಲು ಯೋಚಿಸುವಷ್ಟು ಶಕ್ತಿ, ನಂಬಿಕೆ, ವಿಶ್ವಾಸವೂ ನಮ್ಮಲ್ಲಿ ಇರಲಿಲ್ಲ. ಸಂಕಷ್ಟಕ್ಕೀಡಾದ ಸಂತ್ರಸ್ತರೆಲ್ಲ ಕೂಡಿಕೊಂಡು ವೀಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟೆವು. ಅದು ಕೆಲವೇ ದಿನಗಳಲ್ಲಿ ಕರಾವಳಿಯ ಜನಸಾಮಾನ್ಯರು ಸೇರಿದಂತೆ ಜನಪ್ರತಿನಿಧಿಗಳಿಗೆ ತಲುಪಿತು ಎಂದರು.

ದ.ಕ. ಜಿಲ್ಲೆಯ ಜನಪ್ರತಿನಿಧಿಗಳು, ಭಾರತೀಯ ವಿದೇಶಾಂಗ ಸಚಿವಾಲಯ, ಕುವೈತ್ ಭಾರತೀಯ ರಾಯಭಾರಿ ಕಚೇರಿ, ಎನ್‌ಆರ್‌ಐಗಳು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಹರಸಾಹಸಪಟ್ಟರು. ಕುವೈತ್‌ನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಕಂಪೆನಿಯು ಭಾರತೀಯ 58 ಮಂದಿ ಪೈಕಿ 15ಕ್ಕೂ ಹೆಚ್ಚು ಮಂದಿಗೆ ದೊಡ್ಡ ಮೊತ್ತದ ದಂಡವನ್ನು ಹಾಕಿದೆ. 24 ಸಾವಿರದಿಂದ 40 ಸಾವಿರ ರೂ. ವರೆಗೆ ದಂಡ ಹಾಕಿದ್ದು, ಅದನ್ನು ಭರಿಸಿದ ಬಳಿಕವೇ ಅವರಿಗೆ ಪಾಸ್‌ಪೋರ್ಟ್ ವ್ಯವಸ್ಥೆಯಾಗಲಿದೆ ಎಂದು ಹೇಳಿದರು.

ಜು.17ರಂದು 19 ಮಂದಿ ಮಂಗಳೂರಿಗರು ಆಗಮಿಸಲಿದ್ದಾರೆ. ಬಳಿಕ ವಿವಿಧ ಹಂತಗಳಲ್ಲಿ ಸಂತ್ರಸ್ತರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಆದರೆ ಜಿಪಿ ಪತ್ರ ಹಾಗೂ ಟಿಕೆಟ್ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ಮತ್ತೆ 15 ಮಂದಿಯ ಬಿಡುಗಡೆ ಬಾಕಿಯಾಗಿದೆ. ಎಲ್ಲ ಸಂತ್ರಸ್ತರು ಶೀಘ್ರದಲ್ಲಿಯೇ ಭಾರತಕ್ಕೆ ವಾಪಸಾಗಲಿ ಎನ್ನುವುದು ದೇವರಲ್ಲಿ ನನ್ನ ಹೆಬ್ಬಯಕೆಯಾಗಿದೆ ಎಂದು ತಿಳಿಸಿದರು.

ಹಲವರ ಸಹಕಾರ: ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಸೆಕೆಂಡ್ ಸೆಕ್ರೆಟರಿ ಸಿಬಿ ಯು.ಎಸ್., ಕುವೈತ್‌ನ ಭಾರತೀಯ ರಾಯಭಾರಿ ಕೆ.ಜೀವ ಸಾಗರ್, ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್‌ ಕುಮಾರ್ ಕಟೀಲ್, ಇಂಜಿನಿಯರ್ ಮೋಹನ್‌ ದಾಸ್ ಕಾಮತ್, ಕುವೈತ್‌ನ ಅದಿತಿ ಇಂಟರ್‌ನ್ಯಾಶನಲ್‌ನ ಚೇರ್‌ಮನ್ ಆಕಾಶ್ ಎಸ್. ಪನ್ವಾರ್, ಅನಿವಾಸಿ ಭಾರತೀಯರಾದ ಗೋಕುಲ್‌ ದಾಸ್, ಬಿನು ಫಿಲಿಪ್, ಇಂಬತಮಿಝ್ ಇಲಂಗೋವನ್, ಜೋಸೆಫ್ ಪನಿಕರ್, ಬಿ.ಶೇಖರ್, ರಾಜ್ ಭಂಡಾರಿ, ವಿಜತ್ ಫೆರ್ನಾಂಡಿಸ್, ಮಾಧವ ನಾಯ್ಕಾ, ನೌಶಾದ್ ಬಜ್ಪೆ, ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ ನ ಮಬಿಯಾ ಕಡಬ ಮತ್ತಿತರರು ಸಹಕಾರ ನೀಡಿದ್ದಾರೆ ಎಂದು ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಬಡಾಜೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News