'ಶೀಘ್ರ ಸೇತುವೆ ಪುನರ್‌ ನಿರ್ಮಿಸದಿದ್ದರೆ ಬಂದ್ ಮಾಡಿ ಪ್ರತಿಭಟನೆ'

Update: 2019-07-15 07:41 GMT

ಮಂಗಳೂರು, ಜು.15: ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳ ನಡುವಿನ ಸಂಪರ್ಕ ಕೊಂಡಿಯಾಗಿರುವ ಮುಲ್ಲಾರಪಟ್ನ ಮುತ್ತೂರು ಸೇತುವೆ ಕುಸಿದು ಒಂದು ವರ್ಷ ಕಳೆದರೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಪುನರ್ ನಿರ್ಮಾಣಕ್ಕೆ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರನ್ನೊಳಗೊಂಡ ಸೇತುವೆ ಹೋರಾಟ ಸಮಿತಿ ಆರೋಪಿಸಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಸೇತುವೆ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಸ್ಥಳೀಯರ ಜತೆ ಪ್ರತಿಭಟನೆ ನಡೆಸಿದ ಹೋರಾಟ ಸಮಿತಿ ಶೀಘ್ರವೇ ಸೇತುವೆಯನ್ನು ಪುನರ್ ನಿರ್ಮಾಣ ಮಾಡದಿದ್ದರೆ ಬಂದ್ ಆಚರಿಸಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಬಿ.ಎ. ಮುಹಮ್ಮದ್ ಹನೀಫ್, ಈ ಪ್ರದೇಶದಲ್ಲಿ ಅವ್ಯಾಹತವಾಗಿ ಮರಳು ತೆಗೆದ ಪರಿಣಾಮವಾಗಿ ಸೇತುವೆ ಕುಸಿದಿದೆ ಎಂದು ಆಪಾದಿಸಲಾಗುತ್ತಿದೆ. ಎರಡು ತಾಲೂಕುಗಳನ್ನು ಬೆಸೆಯುವ ಈ ಸಂಪರ್ಕ ಸೇತುವೆ ಕುಸಿದು ಒಂದು ವರ್ಷ ಕಳೆದರೂ ಪುನರ್ ನಿರ್ಮಿಸುವ ಬಗ್ಗೆ ಜನಪ್ರತನಿಧಿಗಳು ನಿರಾಸಕ್ತಿ ವಹಿಸಿರುವುದು ಬೇಸರದ ಸಂಗತಿ. ಸ್ಥಳೀಯ ಶಾಸಕರು ಇತ್ತೀಚೆಗೆ ಗುರುಪುರ ಸೇತುವೆ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮದೇಕ್ಷೇತ್ರದ ಮೂಲರಪಟ್ನ ಸೇತುವೆ ಬಗ್ಗೆ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

ಸಮಿತಿಯ ಉಪಾಧ್ಯಕ್ಷ ಜಯಂತ್ ಬಡಗಬೆಳ್ಳೂರು ಮಾತನಾಡಿ, ಸೇತುವೆ ಕುಸಿದ ಪರಿಣಾಮವಾಗಿ ಮುತ್ತೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆಯೇ ಕುಸಿತವಾಗಿದೆ. ತಮ್ಮ ಸಾವಿರಾರು ರೂಪಾಯಿ ಖರ್ಚುಮಾಡಲು ಸಾಧ್ಯವಾಗದೆ ಪುತ್ರನ ಶಾಲೆಯನ್ನೇ ಬದಲಾಯಿಸಿರುವುದಾಗಿ ಅವರು ಹೇಳಿದರು.

ಗಂಜಿಮಠ, ತಾರೆಮಾರ್, ಕುಪ್ಪೆದವು, ಮುತ್ತೂರು ಪ್ರದೇಶದ ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರು ಕಾಜಿಗುರಿ, ಎರ್ಮಾಲ್, ಸೊರ್ಣಾಡ್ ರಸ್ತೆಯಿಂದ ಬಿಸಿರೋಡ್ ಮಂಗಳೂರಿಗೆ ಪ್ರಯಾಣಿಸಲು ಮೂಲರಪಟ್ನ ಸೇತುವೆ ಪುನರ್ ನಿರ್ಮಾಣಗೊಳಿಸಿ ಎಂದು ಅವರು ಒತ್ತಾಯಿಸಿದರು.

ಆರಂಭದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿಯಿಂದ ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿ ಅಧ್ಯಕ್ಷ ಹರಿಯಪ್ಪ ಮುತ್ತೂರು ವಹಿಸಿದ್ದರು. ದಯಾನಂದ ಶೆಟ್ಟಿ, ಗಣೇಶ್ ಪೂಜಾರಿ, ಮುಹಮ್ಮದ್ ಅನ್ಸಾರ್, ಅಹ್ಮದ್ ಬಾವಾ, ಶಿವಾನಂದ ಮುತ್ತೂರು, ಮುಹಮ್ಮದ್ ಬಶೀರ್ ಹಾಗೂ ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿ, ಶೀಘ್ರವೇ ಸೇತುವೆ ಪುನರ್ ನಿರ್ಮಾಣದ ಭರವಸೆಯನ್ನು ನೀಡುವವರೆಗೆ ಪ್ರತಿಭಟನೆ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ.

30 ರೂ. ಚಿಕಿತ್ಸೆಗೆ 800 ರೂ. ಖರ್ಚು !

ಇನ್ನೋರ್ವ ಉಪಾಧ್ಯಕ್ಷ ಶರೀಫ್ ಬಿಕ್ಕೋಡ್ ಮಾತನಾಡಿ, ಮೂಲರಪಟ್ನದ ಸಮೀಪದ ಎರ್ಮಾಲ್ ಪ್ರದೇಶದಲ್ಲಿ ಏಕೈಕ ಆಸ್ಪತ್ರೆ ಇದ್ದು, ಇದೀಗ ಮುತ್ತೂರು, ಕೊಳವೂರು, ಕುಪ್ಪೆಪದವು, ತಾರೆಮಾರ್ ಗ್ರಾಮಗಳಿಂದ ಚಿಕಿತ್ಸೆಗೆ ಹೋಗಬೇಕಾದರೆ ಸುಮಾರು 800 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದೂ ರೋಗಿಗಳಿಗೆ ಸುಮಾರು 20 ಕಿ.ಮೀ. ಸುತ್ತಾಡಿ ಸಾಗುವುದು ತ್ರಾಸದಾಯಕವಾಗಿದೆ ಎಂದು ಆಕ್ಷೇಪಿಸಿದರು.

ಕಳೆದ ಒಂದು ವರ್ಷದಿಂದ ಜನಪ್ರತಿನಿಧಿಗಳಿಗೆ ಮುಜಗರ ತರಿಸುವುದು ಬೇಡ ಎಂಬ ನಿಟ್ಟಿನಲ್ಲಿ ಸ್ಥಳೀಯರು ಕೇವಲ ಮನವಿಗಳಲ್ಲೇ ಕಾಲ ಕಳೆದರು. ಇದೀಗ ಹೋರಾಟದ ಹಾದಿ ಹಿಡಿಯಲಾಗಿದೆ. ಅಧಿಕಾರಕ್ಕಾಗಿ ರೆಸಾರ್ಟ್‌ನಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸುತ್ತಿರುವ ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News