ಉಡುಪಿ: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ ಆರಂಭ

Update: 2019-07-15 16:21 GMT

ಉಡುಪಿ, ಜು.15: ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 2.25 ಕೋಟಿ ರೂ. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕೊರಗರ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದಿನಿಂದ ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ.

ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಉಡುಪಿ ಜಿಲ್ಲಾ ಸಂಚಾಲಕಿ ಸುಶೀಲಾ ನಾಡ ಮಾತನಾಡಿ, ಅತಿ ಕಡಿಮೆ ಮಾನವ ಸಂಪನ್ಮೂಲ ಹೊಂದಿರುವ ಕೊರಗ ಸಮುದಾಯದ ಸಹಭಾಗಿತ್ವ ಇಲ್ಲದೆ ತಯಾರಿಸಿದ ಯೋಜನೆಗಳು ಯಾವುದೇ ಪರಿಣಾಮ ಬೀರದೆ ಸಂಪೂರ್ಣವಾಗಿ ದುರುಪ ಯೋಗವಾಗುತ್ತಿದೆ. ನಿಗಮದಿಂದ ಮಂಜೂರಾದ ಅನುದಾನಕ್ಕೆ ಸಂಬಂಧಿಸಿ ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ಣ ಮಾಹಿತಿಯನ್ನು ನೀಡದೆ ಏಕಾಏಕಿಯಾಗಿ ಯೋಜನೆ ತಯಾರಿಸಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಸಮುದಾಯದ ಸಂಘಟನೆ ಯೋಜನೆಗೆ ಸಂಬಂಧಿಸಿ ಕರಡು ಪ್ರತಿಯನ್ನು ತಯಾರಿಸಿ ಅಧಿಕಾರಿಗಳಿಗೆ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಸಂಘಟನೆ ತಯಾರಿಸಿದಂತೆ ಯೋಜನೆಯನ್ನು ಕೈಬಿಟ್ಟು ತಾವೇ ತಯಾರಿಸಿದ ಯೋಜನೆಗೆ ಮಂಜೂರಾತಿ ಪಡೆದರು. ಇದೀಗ ಇದೇ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಆದುದರಿಂದ ಅಧಿಕಾರಿಗಳು ತಯಾರಿಸಿದ ಯೋಜನೆಯನ್ನು ಕೈಬಿಟ್ಟು ಜನರ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಅವರು ಆಗ್ರಹಿಸಿದರು.

ವಿವಿಧ ಬೇಡಿಕೆಗಳು: ಕೊರಗರು ಹಾಗೂ ಮಲೆ ಕುಡಿಯರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಅನುಷ್ಠಾನ ಮಾಡಬೇಕು. ತಾಲೂಕುವಾರು ಜನಸಂಖ್ಯೆಗೆ ಅನು ಗುಣವಾಗಿ ಅನುದಾನ ಹಂಚಿಕೆಯಾಗಬೇಕು. ಮೂರನೆ ಒಂದರಷ್ಟು ಅನುದಾನವನ್ನು ಮಹಿಳೆಯರ ಹೆಸರಿಗೆ ಕಾಯ್ದಿರಿಸಿ ಅನುಷ್ಠಾನ ಗೊಳಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಂಘಟನೆ ತಯಾರಿಸಿದ ಜನ ಯೋಜನೆಯನ್ನು ಸಮುದಾಯದ ಪರಿಣಾಮಕಾರಿ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಧರಣಿಯಲ್ಲಿ ಕೊರಗ ಜಿಲ್ಲಾ ಸಮಿತಿ ಅಧ್ಯಕ್ಷ ಪುತ್ರನ್ ಹೆಬ್ರಿ, ಮಾಜಿ ಅಧ್ಯಕ್ಷ ಬೊಗ್ರ ಕೊರಗ, ಕರ್ನಾಟಕ ಮತ್ತು ಕೇರಳ ಕೊರಗಾಭಿವೃದ್ಧಿ ಒಕ್ಕೂಟದ ಅಧ್ಯಕ್ಷೆ ಅಮ್ಮಣ್ಣಿ ಕೊರಗ ಚೋರಾಡಿ, ಮುಖಂಡರಾದ ಕುಮಾರ್ ಕೆಂಜೂರು, ದಿವಾಕರ ಕಳತ್ತೂರು, ಸಂಜೀವ ಬಾರಕೂರು, ಗಿರಿಜಾ ಜನ್ನಾಡಿ ಮೊದಲಾವರು ಉಪಸ್ಥಿತರಿದ್ದರು.

 ಧರಣಿ ಕೈಬಿಟ್ಟ ಕೊರಗರು

ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಜು.16ರಂದು ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕೊರಗರ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಅಹೋ ರಾತ್ರಿ ಧರಣಿಯನ್ನು ರಾತ್ರಿ ವೇಳೆ ಕೈಬಿಡಲಾಯಿತು.

ಆದರೂ ದೂರದ ಊರುಗಳಿಂದ ಆಗಮಿಸಿರುವ ಧರಣಿ ನಿರತರು ರಾತ್ರಿ ಮನೆಗೆ ಹೋಗಲು ವ್ಯವಸ್ಥೆ ಇಲ್ಲದ ಕಾರಣ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಸತ್ಯಾಗ್ರಹ ಕಟ್ಟೆಯಲ್ಲೇ ಟೆಂಟ್ ಹಾಕಿ ಉಳಿದುಕೊಂಡಿದ್ದಾರೆ. ರಾತ್ರಿ ಅಡುಗೆಯನ್ನು ಸ್ಥಳದಲ್ಲಿ ತಯಾರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ ಭಾಗವಹಿಸಿದ ಬಳಿಕವೇ ಮನೆಗೆ ತೆರಳುವುದಾಗಿ ಅವರು ತಿಳಿಸಿದ್ದಾರೆ. ಅದೇ ರೀತಿ ಜಿಪಂ ಅಧ್ಯಕ್ಷ ದಿನಕರಬಾಬು ಕೂಡ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News