ಕೂಳೂರು ಸೇತುವೆಯಿಂದ ಜಿಗಿದು ಆರೋಪಿ ಪರಾರಿ

Update: 2019-07-15 12:53 GMT

ಮಂಗಳೂರು, ಜು.15: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂದರ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಬಳಿ ತಪ್ಪಿಸಿಕೊಂಡು ಪರಾರಿಯಾದನೆನ್ನಲಾದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಕುದ್ರೋಳಿ ನಿವಾಸಿ ಮುನೀರ್ (42) ಪರಾರಿಯಾದ ಆರೋಪಿ.

ಘಟನೆ ವಿವರ

ಕುದ್ರೋಳಿ ನಿವಾಸಿ ಮುನೀರ್ ತನ್ನ ಪತ್ನಿಗೆ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಳಿಕ ತನ್ನ ಲಗೇಜ್ ಸಹಿತ ಮಂಗಳೂರು ತೊರೆಯಲು ಯತ್ನಿಸಿದ್ದಾನೆ. ಆರೋಪಿಯು ಆಟೋ ರಿಕ್ಷಾವೊಂದರಲ್ಲಿ ಹಳೆಯಂಗಡಿ ಸಮೀಪ ಹೋಗುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಅದೇ ಆಟೋದಲ್ಲಿ ಮಂಗಳೂರಿನ ಬಂದರ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಬಳಿ ‘ಮೂತ್ರ ಬರುತ್ತಿದೆ; ಕೆಳಗಿಳಿಯಬೇಕು’ ಎಂದು ಆರೋಪಿ ಹೇಳಿದ್ದು, ಆಟೋದಿಂದ ಇಳಿದ ತಕ್ಷಣವೇ ಸೇತುವೆಯಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತ್ತೆಯಾಗದ ಆರೋಪಿ

ಘಟನೆಯಲ್ಲಿ ಕೂಳುರು ಸೇತುವೆಯಿಂದ ಜಿಗಿದು ತಪ್ಪಿಸಿಕೊಂಡಿರುವ ಆರೋಪಿ ಮುನೀರ್ ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News