ಉಡುಪಿ ಜಿಲ್ಲೆಯ 157 ಗೋ ಕಳವು ಪ್ರಕರಣದ ಆರೋಪಿಗಳ ಪರೇಡ್: ಗಡಿಪಾರು ಎಚ್ಚರಿಕೆ

Update: 2019-07-15 12:33 GMT

ಉಡುಪಿ, ಜು.15: ಉಡುಪಿ ಜಿಲ್ಲೆಯಾದ್ಯಂತ ದಾಖಲಾದ ಗೋ ಕಳ್ಳತನ ಹಾಗೂ ಅಕ್ರಮ ಗೋ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ ಎಂಒಬಿ (ಮೊಡಸ್ ಒಪೆರಾಂಡಿ ಬ್ಯೂರೋ) ಹಾಳೆ ಹೊಂದಿರುವ 157 ಗೋ ಕಳವು ಪ್ರಕರಣದ ಆರೋಪಿಗಳ ಪರೇಡನ್ನು ಸೋಮವಾರ ಬೆಳಗ್ಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಉಪವಿಭಾಗವಾರು ನಡೆಸಲಾಯಿತು.

ಕುಂದಾಪುರದ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕುಂದಾಪುದ ಉಪವಿಭಾಗದ ಪರೇಡ್‌ನಲ್ಲಿ ಉಪವಿಭಾಗ ವ್ಯಾಪ್ತಿಯ ಠಾಣೆಗಳಾದ ಕುಂದಾಪುರ- 15, ಕುಂದಾಪುರ ಗ್ರಾಮಾಂತರ- 14, ಬೈಂದೂರು- 6, ಶಂಕರನಾರಾಯಣ- 5, ಕೊಲ್ಲೂರು- 4, ಗಂಗೊಳ್ಳಿ- 4, ಅಮಾಸೆಬೈಲು-2 ಮಂದಿ ಸೇರಿದಂತೆ ಒಟ್ಟು 50 ಮಂದಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಕುಂದಾಪುರ ಪೊಲೀಸ್ ಉಪವಿಭಾಗಾಧಿಕಾರಿ ಬಿ.ಪಿ.ದಿನೇಶ್ ಕುಮಾರ್ ಮತ್ತು ಕುಂದಾಪುರ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್ ನೇತೃತ್ವದಲ್ಲಿ ನಡೆದ ಉಡುಪಿ ಉಪವಿಭಾಗದ ಪರೇಡ್‌ನಲ್ಲಿ ವಿಭಾಗ ವ್ಯಾಪ್ತಿಯ ಠಾಣೆಗಳಾದ ಕೋಟ- 11, ಹಿರಿಯಡ್ಕ-10, ಮಲ್ಪೆ- 7, ಬ್ರಹ್ಮಾವರ -4 ಮಂದಿ ಸೇರಿದಂತೆ ಒಟ್ಟು 32 ಮಂದಿ ಭಾಗವಹಿಸಿದ್ದರು.

ಕಾರ್ಕಳ ಪೊಲೀಸ್ ಉಪವಿಭಾಗ ಕಛೇರಿಯ ಮುಂಭಾಗದಲ್ಲಿ ನಡೆದ ಕಾರ್ಕಳ ಉಪವಿಭಾಗದ ಪರೇಡ್‌ನಲ್ಲಿ ಉಪವಿಭಾಗದ ಠಾಣೆಗಳಾದ ಕಾರ್ಕಳ ನಗರ- 7, ಕಾರ್ಕಳ ಗ್ರಾಮಾಂತರ- 14, ಹೆಬ್ರಿ- 15, ಅಜೆಕಾರು- 8, ಕಾಪು- 9, ಪಡುಬಿದ್ರಿ- 10, ಶಿರ್ವ- 12 ಮಂದಿ ಸಹಿತ ಒಟ್ಟು 75 ಮಂದಿ ಭಾಗ ವಹಿಸಿದ್ದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಪೊಲೀಸ್ ಉಪವಿಭಾಗಾಧಿಕಾರಿ ಪಿ.ಕೃಷ್ಣಕಾಂತ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಪರೇಡ್‌ನಲ್ಲಿ ಭಾಗಿಯಾದ ಎಂಒಬಿದಾರರಿಗೆ ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದಾಗಿ ಸೂಚಿಸಿ, ಮುಂದುವರೆಸಿದಲ್ಲಿ ಗಡಿಪಾರು /ಗೂಂಡಾ ಕಾಯ್ದೆಯನ್ವಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಅಲ್ಲದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಸನ್ನಡತೆ ಗಾಗಿ ತಾಲೂಕು ದಂಡಾಧಿಕಾರಿಯವರಿಗೆ ಈಗಾಗಲೇ ವರದಿ ಸಲ್ಲಿಸಿದ್ದು, ಅಧಿಕ ಮೊತ್ತದ ಬಾಂಡ್ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ. ಕಳೆದ ತಿಂಗಳು ಈ ಪರೇಡನ್ನು ಠಾಣಾವಾರು ನಡೆಸಲಾಗಿತ್ತು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News