ಮಂಗಳೂರು: ಆ.13ರಿಂದ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

Update: 2019-07-15 12:56 GMT

ಮಂಗಳೂರು, ಜು.15: ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ವತಿಯಿಂದ 2019-20ನೇ ಸಾಲಿನ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ವಿವಿ ಅಧೀನಕ್ಕೆ ಒಳಪಟ್ಟ ಕಾಲೇಜು ವಿದ್ಯಾರ್ಥಿಗಳಿಗಾಗಿ ಆ.13ರಿಂದ 31ರವರೆಗೆ ವಿವಿಧ ಕಾಲೇಜುಗಳಲ್ಲಿ ಏರ್ಪಡಿಸಲಾಗಿದೆ ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ. ಖಾನ್ ತಿಳಿಸಿದರು.

ಆ. 13ರಂದು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು, ಆ.16ರಂದು ಮಂಗಳೂರು ಕೆನರಾ ಕಾಲೇಜಿನಲ್ಲಿ ಲಲಿತಕಲಾ ಸ್ಪರ್ಧೆ, ಆ.19 ಮತ್ತು 20ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಂಗಭೂಮಿ ಸ್ಪರ್ಧೆ, ಆ.26 ಮತ್ತು 27ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನೃತ್ಯ ಸ್ಪರ್ಧೆ, ಆ. 30 ಮತ್ತು 31ರಂದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಸಂಗೀತ ಸ್ಪರ್ಧೆಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಂಗಳೂರು ವಿವಿ ಅಧೀನಕ್ಕೆ ಒಳಪಟ್ಟ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಎಲ್ಲ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರನ್ನು ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ಎಲ್ಲ ಕಾಲೇಜಿನ ಪ್ರಾಂಶುಪಾಲರು ಅನುವು ಮಾಡಿಕೊಡಬೇಕು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ದಕ್ಷಿಣ ವಲಯ ಯುವಜನೋತ್ಸವ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ವಿವಿ ಸ್ಥಾಪಕರ ದಿನದಂದು ಇಡೀ ದಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಂದ ಕಾರ್ಯಕ್ರಮ ಏರ್ಪಡಿಸಲಾಗುವುದು.

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿ ಪ್ರೋತ್ಸಾಹ ನೀಡುತ್ತಿದೆ. ವಿವಿ ವಿದ್ಯಾರ್ಥಿಗಳು ಇವೆರಡು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.

ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಬಿ. ಉದಯ ಉಪಸ್ಥಿತರಿದ್ದರು.

''ಪರೀಕ್ಷೆಗಳ ಸಂದರ್ಭ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್‌ಸಿಸಿ ಚಟುವಟಿಕೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರೆ, ಅಂತಹಾ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಮಳೆಕೊಯ್ಲು ಅಳವಡಿಸಿ, 15 ದಿನದಲ್ಲಿ ವರದಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಎಲ್ಲ ಕಾಲೇಜುಗಳಲ್ಲಿ ಸ್ವಚ್ಛ ಭಾರತ್ ಅಭಿಯಾನ ಮೂಲಕ ಕಾಲೇಜು ಆವರಣ ಸ್ವಚ್ಛವಾಗಿಟ್ಟು ಕೊಳ್ಳುವಂತೆ ಆದೇಶ ನೀಡಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಪ್ರತಿ ವಿದ್ಯಾರ್ಥಿ ಸಂಸ್ಥೆ ಆವರಣದಲ್ಲಿ ಗಿಡ ನೆಟ್ಟು ಎರಡು ವರ್ಷಗಳ ಕಾಲ ಪೋಷಿಸುವಂತೆ ನಿರ್ದೇಶನ ನೀಡಲಾಗಿದೆ.''

-ಪ್ರೊ.ಎ.ಎಂ. ಖಾನ್
ಮಂಗಳೂರು ವಿವಿ ಕುಲಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News