ಲೋಡ್‌ ಶೆಡ್ಡಿಂಗ್ ಆದರೆ ಗ್ರಾಹಕರಿಗೆ ಪರಿಹಾರ!: ಕೇಂದ್ರ ಸಚಿವರು ಹೇಳಿದ್ದು ಹೀಗೆ…

Update: 2019-07-15 16:20 GMT

ರಾಂಚಿ, ಜು.15: ದೇಶದ ಪ್ರತೀ ಮನೆಗೂ ನಿರಂತರ ವಿದ್ಯುತ್ ಪೂರೈಕೆ ಹಾಗೂ ಲೋಡ್‌ಶೆಡ್ಡಿಂಗ್‌ನಿಂದ ಪವರ್‌ಕಟ್ ಆದರೆ ಬಳಕೆದಾರರಿಗೆ ಪರಿಹಾರ ನೀಡುವ ಬಗ್ಗೆ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ವಿದ್ಯುಚ್ಛಕ್ತಿ ಖಾತೆ ಸಚಿವ ಆರ್ ಕೆ ಸಿಂಗ್ ಹೇಳಿದ್ದಾರೆ.

ಅತೀ ಶೀಘ್ರದಲ್ಲೇ ದೇಶದ ಜನತೆಗೆ ನಿರಂತರ ವಿದ್ಯುತ್ ಲಭ್ಯವಾಗಲಿದೆ. ಲೋಡ್‌ಶೆಡ್ಡಿಂಗ್ ಆದರೆ ಬಳಕೆದಾರರಿಗೆ ಸೂಕ್ತ ಪರಿಹಾರ ಲಭಿಸಲಿದೆ. ಕೆಲವೇ ತಿಂಗಳಲ್ಲಿ ಡೀಸೆಲ್ ಜನರೇಟರ್‌ಗಳ ಬಳಕೆಗೆ ಅಂತ್ಯ ಹಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಹಾಯಕರಿಗೆ ವಿಶ್ರಾಂತಿ ಪಡೆಯುವ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಕಳೆದ 65 ವರ್ಷದಲ್ಲಿ ಆದ ಕೆಲಸಕ್ಕಿಂತ ಮೂರು ಪಟ್ಟು ಹೆಚ್ಚಿನ ಕೆಲಸವನ್ನು ನಾವು ಕೇವಲ 5 ವರ್ಷಗಳಲ್ಲಿ ಮಾಡಿ ತೋರಿಸಿದ್ದೇವೆ. ಕಳೆದ ಐದು ವರ್ಷದಲ್ಲಿ 1.20 ಲಕ್ಷ ವ್ಯಾಟ್ ಹೆಚ್ಚುವರಿ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿದ್ದು, ಈಗ ದೇಶದಲ್ಲಿ 3.5 ಲಕ್ಷ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸಲಾಗುತ್ತಿದೆ ಎಂದವರು ಹೇಳಿದ್ದಾರೆ. ತಮ್ಮ ಮನೆಗೂ ವಿದ್ಯುಚ್ಛಕ್ತಿ ಸೌಲಭ್ಯ ದೊರಕುತ್ತದೆ ಎಂದು ಊಹಿಸಿಯೇ ಇರದ ಅತ್ಯಂತ ದೂರದ ಹಳ್ಳಿಯ ನಿವಾಸಿಗಳಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ. ಕೇಂದ್ರ ಸರಕಾರ ಈಗ ವಿದ್ಯುಚ್ಛಕ್ತಿ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಿದೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್, ರಾಜ್ಯದ ಶೇ.80ರಷ್ಟು ಜಿಲ್ಲೆಗಳು ಈ ವರ್ಷದ ಡಿಸೆಂಬರ್ ವೇಳೆಗೆ ನಿರಂತರ ವಿದ್ಯುಚ್ಛಕ್ತಿ ಸೌಲಭ್ಯ ಪಡೆಯಲಿದೆ. ಕಳೆದ ನಾಲ್ಕೂವರೆ ವರ್ಷದ ನಿರಂತರ ಕಾರ್ಯದಿಂದ ಜಾರ್ಖಂಡ್‌ನ ಪ್ರತೀ ಮನೆಗೆ ವಿದ್ಯುಚ್ಛಕ್ತಿ ಸಂಪರ್ಕ ಲಭಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News