ಹಲಸು ಮೇಳ: ಮೂರು ದಿನಗಳಲ್ಲಿ 15ಲಕ್ಷ ರೂ. ವಹಿವಾಟು

Update: 2019-07-15 15:56 GMT

ಉಡುಪಿ, ಜು.15: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟ ಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಹಲಸು ಮೇಳ ಹಾಗೂ ಸಸ್ಯ ಸಂತೆ ಇಂದು ಸಮಾಪನ ಗೊಂಡಿದ್ದು, ಜನರಿಂದ ವ್ಯಕ್ತವಾದ ಉತ್ತಮ ಸ್ಪಂದನೆಯಿಂದ ಒಟ್ಟು 15 ಲಕ್ಷ ರೂ. ವಹಿವಾಟು ನಡೆದಿದೆ.

ಜು.13ರಿಂದ 15ರವರೆಗೆ ನಡೆದ ಮೇಳಕ್ಕೆ ಒಟ್ಟು 10ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿರಬಹುದೆಂದು ಅಂದಾಜಿಸಲಾಗಿದೆ. ಮೇಳದ ಎರಡನೆ ದಿನವಾದ ರವಿವಾರ ಸುಮಾರು 5000 ಮಂದಿ ಸಂದರ್ಶಿಸಿದ್ದಾರೆ. ಸೋಮ ವಾರ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಮೇಳಕ್ಕೆ ಆಗಮಿಸಿ ದ್ದಾರೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲಸಿನಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳಿಗೆ ಹೆಚ್ಚಿನ ಬೇಡಿಕೆಗಳು ಕಂಡು ಬಂದವು. ಈ ಮೂಲಕ ಮೇಳದಲ್ಲಿ ಭಾಗವಹಿಸಿದ್ದ ಜಿಲ್ಲೆ ಮತ್ತು ಹೊರ ಜಿಲ್ಲೆಯ ರೈತರು ಮತ್ತು ವ್ಯಾಪಾರಸ್ಥರ 28 ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ರವಿವಾರ ನಿರೀಕ್ಷೆಗಿಂತ ಹೆಚ್ಚಿನ ಜನ ಆಗಮಿಸಿದ ಪರಿಣಾಮ ಬಹುತೇಕ ಆಹಾರ ಖಾದ್ಯಗಳು, ಹಲಸಿನ ಹಣ್ಣುಗಳು ಎರಡೇ ದಿನಕ್ಕೆ ಖಾಲಿಯಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆಯ ರೈತರು ತಂದ ಸುಮಾರು ಮೂರು ಟನ್ ಹಲಸು ರವಿವಾರವೇ ಪೂರ್ತಿಯಾಗಿ ಮಾರಾಟ ವಾಗಿತ್ತು. ಹಲಸಿ ಹಣ್ಣಿನ ಮಾರಾಟದಿಂದ ಸುಮಾರು 3 ಲಕ್ಷ ರೂ ವಹಿವಾಟು ನಡೆಸಲಾಗಿದೆ. ಹೀಗೆ ಹಲಸು, ಹಲಸಿನ ಉತ್ಪನ್ನಗಳು, ಸಸಿಗಳ ಮಾರಾಟದಿಂದ ಒಟ್ಟು 15ಲಕ್ಷ ರೂ. ವ್ಯವಹಾರ ನಡೆದಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ತಿಳಿಸಿದ್ದಾರೆ.

ಮೇಳದಲ್ಲಿ ಆಯೋಜಿಸಲಾದ ಸಸ್ಯ ಸಂತೆಯಲ್ಲಿ ಆಲಂಕಾರಿಕ ಗಿಡ, ಗೇರು, ತರಕಾರಿ, ಹಲಸು, ಅಡಿಕೆ, ತೆಂಗು ಸೇರಿದಂತೆ ಸುಮಾರು 7-8ಸಾವಿರ ಗಿಡಗಳು ಮಾರಾಟ ಆಗಿವೆ. ಈ ಬಾರಿ ಗೇರು ಮತ್ತು ಆಲಂಕಾರಿಕಾ ಗಿಡ ಗಳಿಗೆ ಹೆಚ್ಚಿನ ಬೇಡಿಕೆಗಳಿದ್ದವು. ಅದೇ ರೀತಿ 500 ಹಲಸಿನ ಗಿಡಗಳು ಕೂಡ ಮಾರಾಟ ಆಗಿವೆ.

ತರಕಾರಿಯಲ್ಲಿ ಬೆಂಡೆ, ಬದನೆ, ಹೀರೆ, ಮೆಣಸು, ಕುಂಬಳಕಾಯಿ ಸಸಿಗಳಿದ್ದು, ಎಲ್ಲ ಗಿಡಗಳು ಎರಡನೇ ದಿನವೇ ಖಾಲಿಯಾಗಿದ್ದವು. ಮೂರನೆ ದಿನವೂ ಸಸಿಗಳಿಗೆ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಗಿಡಗಳನ್ನು ಫಾರ್ಮ್‌ನಿಂದ ತರಿಸಿಕೊಳ್ಳಲಾಯಿತು. ಮೇಳದ ಪ್ರಯುಕ್ತ ಸೋಮವಾರ ಉಡುಪಿ ತಾಲೂಕು ವ್ಯಾಪ್ತಿ ರೈತರಿಗೆ ಜಲ ಸಂರಕ್ಷಣೆ ಬಗ್ಗೆ ವಿಚಾರ ಸಂಕೀರಣ ನಡೆಸಲಾಯಿತು.

ಕಳೆದ ಬಾರಿ ಎರಡು ದಿನಗಳ ಕಾಲ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಇದಕ್ಕೆ ಹಿಂದಿಗಿಂತ ಹೆಚ್ಚು ಸ್ಪಂದನೆ ದೊರೆತಿದೆ. ಒಟ್ಟು 28 ಮಳಿಗೆಗಳಲ್ಲಿ ಅಂದಾಜು 15 ಲಕ್ಷ ರೂ. ವಹಿವಾಟು ನಡೆದಿದೆ.
-ಭುವನೇಶ್ವರಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ

ಮೇಳದಲ್ಲಿ ಅಂಗೊನದ ಐಸಿರಿ

ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳ ಲಾದ ಜಿಲ್ಲಾ ಮಟ್ಟದ ಹಲಸಿನ ಹಣ್ಣಿನ ಮೇಳದಲ್ಲಿ ಸಿರಿತುಳುವ ಚಾವಡಿ ವತಿಯಿಂದ ಸೋಮವಾರ ಅಂಗೊನದ ಐಸಿರಿ ತುಳು ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.

ಸಿರಿತುಳು ಚಾವಡಿಯ ಅಧ್ಯಕ್ಷ ಕುದಿ ವಸಂತ್ ಶೆಟ್ಟಿ ಹಲಸಿನ ಹಣ್ಣಿನ ಮಹತ್ವದ ಬಗ್ಗೆ ಮಾತನಾಡಿದರು. ಜಿಲ್ಲಾ ತೋಟಗಾರಿಕಾ ಅಧಿಕಾರಿಗಳಾದ ಸಂಜೀವ ನಾಯಕ್, ನಿದೇಶ್, ಗುರು, ಶ್ರೀನಿವಾಸ್, ದೀಪ, ಶ್ವೇತಾ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಧರ್ ಕಲ್ಮಾಡಿ, ಸುಭಾಷಿತ್, ವೈದೇಹಿ ಸುಭಾಷಿತ್, ಸುಪಲಿತ ಮಾನ್ ಪ್ರೀತ್, ಕೀರ್ತನ್, ಸ್ವಸಿತಿಕ್ ಮೊದಲಾದ ಗಣ್ಯರು ಭಾಗವಹಿಸಿದ್ದರು. ಈಶ್ವರ್ ಶೆಟ್ಟಿ ಚಿಟ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News