ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆ ಮೊಟ್ಟೆ ನೀಡುವುದಕ್ಕೆ ಬಿಜೆಪಿ ವಿರೋಧ

Update: 2019-07-15 15:58 GMT

ರಾಯ್‌ಪುರ, ಜು.15: ಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಊಟದಲ್ಲಿ ಮತ್ತೆ ಮೊಟ್ಟೆಗಳನ್ನು ನೀಡುವ ಛತ್ತೀಸ್‌ಗಢದ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ವಿಪಕ್ಷ ಬಿಜೆಪಿ ಟೀಕಿಸಿದ್ದು, ಇದು ವಿದ್ಯಾರ್ಥಿಗಳನ್ನು ಮಾಂಸಾಹಾರಿಗಳನ್ನಾಗಿಸುವ ಹುನ್ನಾರ ಎಂದು ಆರೋಪಿಸಿದೆ.

ಈ ಹಿಂದೆ ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಸರಕಾರಿ ಶಾಲೆಗಳ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆಯನ್ನು ರದ್ದುಗೊಳಿಸಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಜನವರಿಯಲ್ಲಿ ಮತ್ತೆ ಮೊಟ್ಟೆ ವಿತರಿಸಲು ಕ್ರಮ ಕೈಗೊಂಡಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡುವಂತೆ ಸರಕಾರ ತಿಳಿಸಿದೆ.

ಮಕ್ಕಳಲ್ಲಿ ಕಂಡುಬರುವ ದೀರ್ಘಕಾಲದ ಅಪೌಷ್ಟಿಕತೆ ಹಾಗೂ ಬೆಳವಣಿಗೆ ಕುಂಠಿತವಾಗುವ ಸಮಸ್ಯೆಯನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಭೂಪೇಶ್ ಬಾಘೆಲ್ ನೇತೃತ್ವದ ಕಾಂಗ್ರೆಸ್ ಸರಕಾರ ಹೇಳಿದೆ. ರಾಜ್ಯದಲ್ಲಿ 14ರ ಕೆಳಹರೆಯದ ಶೇ.37 ಮಕ್ಕಳಲ್ಲಿ ಕಡಿಮೆ ತೂಕ ಅಥವಾ ಬೆಳವಣಿಗೆ ಕುಂಠಿತಗೊಂಡಿರುವ ಸಮಸ್ಯೆ ಇದೆ. ಆದಿವಾಸಿ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಶೇ.44ರಷ್ಟಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

“ನಾವು ಮೊಟ್ಟೆ ತಿನ್ನುವುದಿಲ್ಲ. ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ನೀಡುತ್ತಿರುವುದನ್ನು ಜುಲೈ 17ರೊಳಗೆ ರದ್ದುಗೊಳಿಸಬೇಕು, ಇಲ್ಲದಿದ್ದರೆ ರಾಜ್ಯದಾದ್ಯಂತ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸುತ್ತೇವೆ” ಎಂದು ಕಬೀರ್ ಪಂಥದ ಅನುಯಾಯಿಗಳು ಜುಲೈ 12ರಂದು ಕವಾರ್ಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ಕೂಡಾ ಬೆಂಬಲ ಸೂಚಿಸಿದೆ.

ಛತ್ತೀಸ್‌ಗಢದ ಹಲವು ಸಮುದಾಯಗಳು ಸಸ್ಯಾಹಾರಿಗಳಾಗಿದ್ದು,  ಮಕ್ಕಳಿಗೆ ಮೊಟ್ಟೆ ವಿತರಿಸುವುದು ರಾಜ್ಯದ ಸೌಹಾರ್ದತೆಗೆ ಧಕ್ಕೆ ತರಬಹುದು. ಸರಕಾರ ಮಕ್ಕಳನ್ನು ಮಾಂಸಾಹಾರಿಗಳಾಗಲು ಬಲವಂತ ಪಡಿಸುತ್ತಿದೆ. ಶಾಲೆಯಲ್ಲಿ ಮಕ್ಕಳನ್ನು ಸಸ್ಯಾಹಾರಿಗಳು, ಮಾಂಸಾಹಾರಿಗಳು ಎಂದು ವಿಭಾಗಿಸುವುದು ಸರಿಯೇ. ಒಂದು ಸಮುದಾಯದ ಪದ್ಧತಿಗೆ ವಿರುದ್ಧವಾಗಿರುವ ನೀತಿಯನ್ನು ಸರಕಾರ ಕೈಬಿಡಬೇಕು ಎಂದು ಛತ್ತೀಸ್‌ಗಢ ಬಿಜೆಪಿ ವಕ್ತಾರ ಸಚ್ಚಿದಾನಂದ ಉಪಾಸನೆ ಹೇಳಿದ್ದಾರೆ. ಆದರೆ ಬಿಜೆಪಿಯ ಆರೋಪವನ್ನು ನಿರಾಕರಿಸಿರುವ ಸರಕಾರ, ಇಲ್ಲಿ ಬಲವಂತದ ಪ್ರಶ್ನೆಯೇ ಇಲ್ಲ. ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ನಿವಾರಣೆ ಉದ್ದೇಶದಿಂದ ಮೊಟ್ಟೆ ವಿತರಿಸಲಾಗುತ್ತಿದೆ ಎಂದು ಹೇಳಿದೆ. ಸರಕಾರದ ನಿರ್ಧಾರಕ್ಕೆ ರಾಜ್ಯದಲ್ಲಿ ‘ಆಹಾರದ ಹಕ್ಕು’ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 30 ಎನ್‌ಜಿಒ ಸಂಘಟನೆಗಳೂ ಬೆಂಬಲ ಸೂಚಿಸಿವೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಹಾಲು ನೀಡುವ ಇತರ ಆಯ್ಕೆಯತ್ತ ಗಮನ ಹರಿಸಬೇಕು. ಆದರೆ ಮೊಟ್ಟೆ ನೀಡುವುದನ್ನು ಮುಂದುವರಿಸಬೇಕು ಎಂದು ಎನ್‌ಜಿಒ ಸಂಘಟನೆಗಳು ಒತ್ತಾಯಿಸಿವೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಂಕಿಅಂಶದ ಪ್ರಕಾರ ಛತ್ತೀಸ್‌ಗಢ ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಿದೆ. ಆದ್ದರಿಂದ ಆರೋಗ್ಯದಾಯಕ ಆಹಾರ ಮೊಟ್ಟೆ ನೀಡುವುದು ಒಳ್ಳೆಯದು. ಮೊಟ್ಟೆ ತಿನ್ನದ ಮಕ್ಕಳು ಬೇಡ ಎಂದು ಹೇಳಿದರಾಯಿತು ಎಂದು ಸಾಮಾಜಿಕ ಕಾರ್ಯಕರ್ತೆ ಮಮತಾ ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News