ಟೋಲ್ ಸಂಗ್ರಹಿಸದಂತೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಸಚಿವ ಖಾದರ್ ಪತ್ರ

Update: 2019-07-15 16:49 GMT

ಮಂಗಳೂರು, ಜು.15: ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಎನ್‌ಐಟಿಕೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಎನ್‌ಐಟಿಕೆ ಸಮೀಪದ ರಾ.ಹೆ.ಯಲ್ಲಿ ಟೋಲ್ ಸಂಗ್ರಹ ಕೇಂದ್ರವಿದ್ದು, ಇದು ಸ್ಥಾಪನೆಯಾಗುವ ಪೂರ್ವದಲ್ಲಿ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಟೋಲ್ ಸಂಗ್ರಹ ಕೇಂದ್ರದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೊಂದು ಟೋಲ್ ಸಂಗ್ರಹ ಕೇಂದ್ರ (ಹೆಜಮಾಡಿ) ಇದ್ದು, ಇದರಿಂದ ಸಾರ್ವಜನಿಕರಿಗೆ ತುಂಬ ತೊಂದರೆ ಆಗುತ್ತಿದೆ ಎಂದು ಸಚಿವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಎನ್‌ಐಟಿಕೆ ಸಮೀಪದ ಟೋಲ್ ಸಂಗ್ರಹ ಸ್ಥಾಪಿಸುವ ಮುನ್ನ ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ), ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಗುತ್ತಿಗೆದಾರರ ಜತೆ ನಡೆದ ಸಾರ್ವಜನಿಕರ ಸಭೆಯಲ್ಲಿ ಎರಡು ಷರತ್ತುಗಳನ್ವಯ ಟೋಲ್ ಸಂಗ್ರಹ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.

ಮೊದಲನೆಯದಾಗಿ, ‘ಸ್ಥಳೀಯರಿಂದ ಟೋಲ್ ಸುಂಕವನ್ನು ಸಂಗ್ರಹಿಸುವಂತಿಲ್ಲ’. ಎರಡನೆಯದಾಗಿ, ‘ಒಂದು ವರ್ಷದಲ್ಲಿ ಟೋಲ್ ಸಂಗ್ರಹ ಕೇಂದ್ರವನ್ನು ಹೆಜಮಾಡಿಯಲ್ಲಿರುವ ಟೋಲ್ ಸಂಗ್ರಹ ಕೇಂದ್ರದೊಂದಿಗೆ ವಿಲೀನಗೊಳಿಸುವುದು’ ಎನ್ನುವುದು ಆ ಷರತ್ತುಗಳಾಗಿದ್ದವು. ಆದರೆ, ಎನ್‌ಐಟಿಕೆ ಟೋಲ್ ಸಂಗ್ರಹ ಕೇಂದ್ರದಿಂದ ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡುತ್ತಿದ್ದು, ಕೇಂದ್ರವು ಇನ್ನೂ ವಿಲೀನಗೊಂಡಿಲ್ಲ. ಈ ಟೋಲ್ ಸಂಗ್ರಹ ಕೇಂದ್ರವು ಅವೈಜ್ಞಾನಿಕವಾಗಿದೆ ಎಂದು ಸಚಿವರು ವಿವರಿಸಿದರು.

ಎನ್‌ಐಟಿಕೆ ಟೋಲ್ ಸಂಗ್ರಹಣಾ ಕೇಂದ್ರದಿಂದ ಸ್ಥಳೀಯರಿಗೆ ಶುಲ್ಕ ಸಂಗ್ರಹದಿಂದ ವಿನಾಯಿತಿ ನೀಡಲು ಹಾಗೂ ಟೋಲ್ ಕೇಂದ್ರವನ್ನು ಹೆಜಮಾಡಿಯಲ್ಲಿರುವ ಟೋಲ್ ಸಂಗ್ರಹ ಕೇಂದ್ರದೊಂದಿಗೆ ವಿಲೀನಗೊಳಿಸುವಂತೆ ಶಿಫಾರಸು ಮಾಡಬೇಕು. ಅಲ್ಲಿಯವರೆಗೆ ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡದಂತೆ ಗುತ್ತಿಗೆದಾರರಿಗೆ ಆದೇಶಿಸಲು ಜಿಲ್ಲಾಧಿಕಾರಿಗೆ ಸೂಚಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಟೋಲ್ ಸಂಗ್ರಹ ತಡೆಗೆ ಸಚಿವರಿಂದ ಸರಕಾರಕ್ಕೆ ಪತ್ರ: ಮುನೀರ್ ಕಾಟಿಪಳ್ಳ

ಸುರತ್ಕಲ್ ಟೋಲ್ ಕೇಂದ್ರದಲ್ಲಿ ಜು.16ರಿಂದ ಸ್ಥಳೀಯರಿಂದ ಟೋಲ್ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ತಡೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಲು ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ತಾತ್ಕಾಲಿಕ ನೆಲೆಯಲ್ಲಿರುವ ಟೋಲ್‌ಗೇಟ್ ಮುಚ್ಚುವ ನಿಟ್ಟಿನಲ್ಲಿ ಮುಂದುವರಿಯಲು ಸೂಚಿಸಿದ್ದಾರೆ. ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮನವಿಗೆ ಸ್ಪಂದಿಸಿದ ಹಾಗೂ ಮಂಗಳೂರಿನ ಜನತೆಯ ಪರ ನಿಂತ ಸಚಿವ ಯು.ಟಿ.ಖಾದರ್ ಅವರಿಗೆ ಸಮಿತಿ ಆಭಾರಿಯಾಗಿದೆ. ವಿಳಂಬವಿಲ್ಲದೆ ಟೋಲ್‌ಗೇಟ್ ತೆರವುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರವು ಒತ್ತಡ ಹೇರಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News