ಕೆಲಸದಲ್ಲಿ ಪ್ರಾಮಾಣಿಕತೆ, ಛಲ, ನಿಷ್ಠೆಯಿದ್ದಲ್ಲಿ ಯಶಸ್ಸು ಸಾಧ್ಯ- ಕೃಷ್ಣಮೂರ್ತಿ

Update: 2019-07-15 16:31 GMT

ಪುತ್ತೂರು: ನಾವು ಮಾಡುವ ಯಾವುದೇ ಕೆಲಸದಲ್ಲಿ ಕೀಳರಿಮೆ ಇರಬಾರದು. ಕೆಲಸದಲ್ಲಿ ಪ್ರಾಮಾಣಿಕತೆ, ಛಲ ಮತ್ತು ನಿಷ್ಠೆಯಿದ್ದಲ್ಲಿ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಹೇಳಿದರು.

ಅವರು ಸೋಮವಾರ ಕರ್ನಾಟಕ ಸರ್ಕಾರ, ದ.ಕ.ಜಿ.ಪಂ. ಮಂಗಳೂರು, ತಾಪಂ ಪುತ್ತೂರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯುವ ಉದ್ಯೋಗಾಂಕ್ಷಿಗಳ ಸೇವಾ ಕೇಂದ್ರ, ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ವಾಣಿಯನ್ ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು, ಈಶ ವಿದ್ಯಾಲಯ ಮತ್ತು ರೋಟರಿ ಕ್ಲಬ್ ಯುವ ಇವುಗಳ ಸಹಯೋಗದಲ್ಲಿ ಇಲ್ಲಿನ ಶ್ರಿ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ನಡೆದ `ಜಿಲ್ಲಾ ಉದ್ಯೋಗ ಮೇಳ-2019' ವನ್ನು ಉದ್ಘಾಟಿಸಿ ಮಾತನಾಡಿದರು. 

ಜೀವನದಲ್ಲಿ ಸಾಧನೆಗೆ ಕನಸು ಮತ್ತು ದೂರದೃಷ್ಟಿ ಮುಖ್ಯವಾಗಿದೆ. ಇವುಗಳ ಸಮನ್ವಯತೆಯಿಂದ ಮುಂದುವರಿದಲ್ಲಿ ಬದುಕಿನಲ್ಲಿ ಗುರಿ ಮುಟ್ಟಲು ಸಾಧ್ಯ. ನಾವು ಮಾಡುವ ಕೆಲಸ ಯಾವುದು ಎಂಬುದು ಮುಖ್ಯವಲ್ಲ. ಅದರಲ್ಲಿ ನಮಗಿರುವ ನಿಷ್ಠೆ, ಮಾಡುವ ಶ್ರಮ ಮುಖ್ಯವಾದುದು. ಗುಡಿಸುವ ಕೆಲಸವೂ ಶ್ರೇಷ್ಠವೇ ಆಗಿದೆ. ಸ್ವಚ್ಛತಾ ಕಾರ್ಯ ಮಾಡುವ ಪೌರ ಕಾರ್ಮಿಕರು ಶ್ರೇಷ್ಠರು. ಕಾನೂನು ಬಾಹಿರವಲ್ಲದ ಮತ್ತು ನೈತಿಕತೆಯ ವ್ಯಾಪ್ತಿಯಲ್ಲಿರುವ ಯಾವುದೇ ಕೆಲಸವನ್ನಾದರೂ ಹೆಮ್ಮೆಯಿಂದ ಮಾಡಬೇಕು. ಅದರಲ್ಲಿ ಕೀಳರಿಮೆ ಇರಲೇಬಾರದು. ಅದನ್ನು ಅವಮಾನವೆಂದು ಬಗೆದುಕೊಂಡರೆ ಯಾವತ್ತೂ ಮೇಲೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಯಾವುದಾದರೂ ಉದ್ಯೋಗ ಮಾಡಬಲ್ಲೆ ಎಂಬ ಮನಸು ಎಲ್ಲರಲ್ಲೂ ಇದ್ದರೆ ಖಂಡಿತಾ ನಿರುದ್ಯೋಗ ಸಮಸ್ಯೆ ಬರುವುದಿಲ್ಲ ಎಂದು ಹೇಳಿದ ಅವರು, ತಾಂತ್ರಿಕ ಕೋರ್ಸ್‍ಗಳು ಉದ್ಯೋಗ ಆಧರಿತವಾಗಿದ್ದರೆ, ಪದವಿ ಕೋರ್ಸ್‍ಗಳು ಪಾಂಡಿತ್ಯ ಆಧರಿತವಾದುದು.

ಪಾಂಡಿತ್ಯದಿಂದಲೂ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಿದೆ. ಸರಕಾರಿ ನೌಕರಿ ಸಿಕ್ಕಿದರೆ ಮಾತ್ರ ಅದು ಉದ್ಯೋಗ ಎಂಬ ಭಾವನೆ ಹಿಂದೆಲ್ಲ ಇತ್ತು. ಆದರೆ ಜಾಗತೀಕರಣದ ಪರಿಣಾಮವಾಗಿ ಉದ್ಯೋಗ ಕ್ರಾಂತಿಯೇ ಆಯಿತು. ಯಾವುದೇ ಕ್ಷೇತ್ರವಾದರೂ ಉತ್ತಮ ಸಂಪಾದನೆ ಮಾಡಬಹುದು ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಶಿಕ್ಷಣ ಪಡೆದು, ಉದ್ಯೋಗ ಸಂಪಾದಿಸಿದ ಬಳಿಕ ಹೆತ್ತವರ ಆಸೆ, ಆಕಾಂಕ್ಷೆಗಳಿಗೆ ತಣ್ಣೀರೆರಚುವ ಕಾರ್ಯ ಮಾಡಬೇಡಿ. ಇತ್ತೀಚೆಗೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನಮ್ಮ ಸಂಸ್ಕøತಿಯಲ್ಲ. ನಾವು ಪಡೆದ ವಿದ್ಯೆ,  ಉದ್ಯೋಗವು ಹೆತ್ತವರನ್ನು ದೂರ ಮಾಡಬಾರದು. ಈ ಎಚ್ಚರ ಎಲ್ಲರಲ್ಲೂ ಇರಬೇಕು ಎಂದರು.

ನಗರಸಭೆ ಪೌರಾಯುಕ್ತರಾದ ರೂಪಾ ಶೆಟ್ಟಿ, ಪುತ್ತೂರು ರೋಟರಿ ಕ್ಲಬ್ ಯುವ ಇದರ ಅಧ್ಯಕ್ಷರಾದ ಚೇತನ್ ಪ್ರಕಾಶ್, ತಾಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವಾ, ಪುತ್ತೂರು ತಾಲೂಕು ವಾಣಿಯನ್/ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಪಾಟಾಳಿ ಮಾತನಾಡಿ ಶುಭ ಹಾರೈಸಿದರು.

ಶ್ರೀ ಮಹಾಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್ ಎಸ್ ಸ್ವಾಗತಿಸಿದರು. ಈಶ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಗೋಪಾಲ ಕೃಷ್ಣ ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಪಂ ವ್ಯವಸ್ಥಾಪಕ ಶಿವಪ್ರಕಾಶ್ ಅಡ್ಪಂಗಾಯ ವಂದಿಸಿದರು. ಮೇಳದಲ್ಲಿ ಸುಮಾರು ಒಂದು ಸಾವಿರದಷ್ಟು ಉದ್ಯೋಗಾರ್ಥಿಗಳು ಭಾಗವಹಿಸಿ ನೋಂದಾವಣೆ ಮಾಡಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News