ವಿದ್ಯಾರ್ಥಿಗಳ ಮೊಬೈಲ್ ಪತ್ತೆ ಕಾರ್ಯಾಚರಣೆ: ಆರಂಭದಲ್ಲಿ ಎಚ್ಚರಿಕೆ, ಬಳಿಕ ಕಾನೂನು ಕ್ರಮ- ಎ.ಸಿ

Update: 2019-07-15 16:38 GMT

ಪುತ್ತೂರು: ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಬಗ್ಗೆ ವಿಶೇಷವಾದ ಜಾಗೃತಿ ಅಭಿಯಾನ ಆರಂಭವಾಗಿದೆ. ಮೊದಲ ಹಂತದಲ್ಲಿ ಎಚ್ಚರಿಕೆ ನೀಡುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಅನಿರೀಕ್ಷಿತ ದಾಳಿ ನಡೆಸಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಮತ್ತು ಪರಿಸರದ ಅಂಗಡಿಗಳಿಗೆ ದಾಳಿ ನಡೆಸಲಾಗಿದೆ.

ಇಲ್ಲಿ ವಶಪಡಿಸಿಕೊಂಡಿರುವ ಮೊಬೈಲ್ ಗಳನ್ನು ವಾರಸುದಾರರಿಗೆ ತಲುಪಿಸಲಾಗುವುದು. ಮುಂದಿನ ಹಂತದ ದಾಳಿ ವೇಳೆ ಅಂಗಡಿಗಳಲ್ಲಿ ಮತ್ತು ಶಾಲಾ ಕಾಲೇಜುಗಳ ಮಕ್ಕಳ ಕೈಯಲ್ಲಿ ಮೊಬೈಲ್ ದೊರೆತರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಸೋಮವಾರ ಪತ್ರಕರ್ತರಲ್ಲಿ ಅವರು ಮಾತನಾಡಿ, ಈಗಾಗಲೇ ಶಾಲಾ ಕಾಲೇಜುಗಳಿಗೆ, ಪೊಲೀಸ್ ಇಲಾಖೆಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಈ ಬಗ್ಗೆ ಮಕ್ಕಳ ಪೋಷಕರೂ ಹೆಚ್ಚಿನ ನಿಗಾ ವಹಿಸಬೇಕು. ಮೊಬೈಲ್ ಬಳಕೆಯಿಂದ ಉಪಯೋಗಕ್ಕಿಂತ ಹೆಚ್ಚು ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದ ಅವರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಲು ಅಧಿಕಾರಿಯೊಬ್ಬರ ನೇಮಕ ಶೀಘ್ರದಲ್ಲಿ ನಡೆಸಲಾಗುವುದು.

ಈ ಅಧಿಕಾರಿ 'ಅಧಿಕಾರ' ನಡೆಸುವುದಕ್ಕಲ್ಲ. ಮಕ್ಕಳಲ್ಲಿ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ನೀಡಲುವಲ್ಲಿ ಸಹಾಯ ಮಾಡುತ್ತಾರೆ. ಶಾಲಾ ಕಾಲೇಜುಗಳಲ್ಲಿ ಸಮಾಲೋಚನಾ ಸಮಿತಿ ರಚನೆ ನಡೆಯುತ್ತಿದ್ದು, ಇವರ ಜತೆ ಅಧಿಕಾರಿಯವರು ಮಕ್ಕಳ ಮೆಂಟರಿಂಗ್ ನಡೆಸಲು ಸಹಾಯ ಮಾಡಲಿದ್ದಾರೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಆದರೆ ಇಲ್ಲಿ ಅನುದಾನದ ಲಭ್ಯತೆಯನ್ನು ಅನುಸರಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಸಾಧ್ಯವಾದಷ್ಟೂ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಪ್ರಯತ್ನ ಮಾಡಬೇಕು ಎಂದವರು ತಿಳಿಸಿದರು.

ಮಕ್ಕಳನ್ನು ವಾಹನಗಳಲ್ಲಿ ಶಾಲೆಗೆ ಕರೆದೊಯ್ಯುತ್ತಿರುವ ವಿಚಾರ ಕುರಿತು ಅನೇಕ ಸಮಸ್ಯೆಗಳು ಉಂಟಾಗಿವೆ. ಈ ಬಗ್ಗೆ ಡಿವೈಎಸ್ಪಿ, ಸಾರಿಗೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿತರ ಸಂಬಂಧಿತ ಅಧಿಕಾರಿಗಳ ಸಭೆಯನ್ನು ಜುಲೈ 20 ಕರೆಯಲಾಗಿದೆ. ಜನತೆಗೆ ಹಾಗೂ ವಾಹನ ಚಾಲಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪುತ್ತೂರು ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಪರಿಹಾರ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಉಪವಿಭಾಗಾಧಿಕಾರಿ ತಿಳಿಸಿದರು.

ಜನತೆಯ ಆಧಾರ್ ತಿದ್ದುಪಡಿಗೆ ಈಗಾಗಲೇ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಹೊಸ ತಂಡವೊಂದನ್ನು ಬಳಕೆ ಮಾಡಲಾಗುತ್ತಿದೆ. ಜುಲೈ 16ರಿಂದ 31ರ ತನಕ ಈ ಆಧಾರ್ ತಿದ್ದುಪಡಿ ನಡೆಸುವ ತಂಡ ಕಡಬ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ನಿರ್ವಹಿಸಲಿದೆ. ಆ.1ರಿಂದ 15 ತನಕ ಉಪ್ಪಿನಂಗಡಿಯಲ್ಲಿ ಆಧಾರ್ ತಿದ್ದುಪಡಿ ಮಾಡಲಿದೆ. ದಿನವೊಂದಕ್ಕೆ 20ರಿಂದ 30 ಆಧಾರ್ ಕಾರ್ಡ್ ತಿದ್ದುಪಡಿ ಮಾಡಲಾಗುವುದು. ನಂತರ ಉಳಿದವರಿಗೆ ಟೋಕನ್ ನೀಡಲಾಗುತ್ತದೆ. ಜನಸಾಮಾನ್ಯರು ತಮ್ಮ ಆಧಾರ್ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳುವ ಹಿನ್ನಲೆಯಲ್ಲಿ ಈ ಹೊಸ ಆಧಾರ್ ತಿದ್ದುಪಡಿ ತಂಡವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News