ಗ್ರಾಹಕರ ಹಿತ ಕಾಪಾಡುವುದು,ಸಹಕಾರ ನೀಡುವ ಬದ್ಧತೆ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹೊಂದಿದೆ: ರಮಾನಾಥ ರೈ

Update: 2019-07-15 16:42 GMT

ಬಂಟ್ವಾಳ, ಜು. 15: ಸಮಾನ ಮನಸ್ಕರು ಸೇರಿಕೊಂಡು ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸೊಸೈಟಿಯನ್ನು ಆರಂಭಿಸಲಾಗಿದೆ. ಗ್ರಾಹಕರ ಹಿತವನ್ನು ಕಾಪಾಡುವುದು, ಅವರಿಗೆ ಸಹಕಾರ ನೀಡುವ ಬದ್ಧತೆಯನ್ನು ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹೊಂದಿದೆ ಎಂದು ಮಾಜಿ ಸಚಿವ, ಸೊಸೈಟಿ ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಜೋಡುಮಾರ್ಗದಲ್ಲಿ ಸೋಮವಾರ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸುವ ಕನಸು ಇದೀಗ ಸಕಾರಗೊಂಡಿದೆ. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಸಹಕಾರಿ ಬ್ಯಾಂಕ್‍ಅನ್ನು ವಿಸ್ತರಿಸಲಾಗುವುದು. ಸಹಕಾರ ಸಂಘಗಳ ನಿಬಂಧನೆಗೆ ಪೂರಕವಾಗಿ ಕೆಲಸ ಮಾಡಲಿರುವ ಸಂಸ್ಥೆ, ಬಂಟ್ವಾಳ ತಾಲೂಕಿನ ಜನರ ಆಶೋತ್ತರಗಳನ್ನು ಆರ್ಥಿಕ ಅಗತ್ಯಗಳಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಸು ಕರುವಿನ ಲಾಂಛನವನ್ನು ಸೊಸೈಟಿ ಹೊಂದಿದ್ದು, ಇದು ಗ್ರಾಹಕರ ಮತ್ತು ಸೊಸೈಟಿ ಬಾಂಧವ್ಯವನ್ನು ಸೂಚಿಸುತ್ತದೆ. ಸಹಕಾರ ಸಂಘಗಳ ನಿಬಂಧನೆಗೆ ಪೂರಕವಾಗಿ ಕೆಲಸ ಮಾಡಲಿರುವ ಸಂಸ್ಥೆ ಬಂಟ್ವಾಳ ತಾಲೂಕಿನ ಜನರ ಆಶೋತ್ತರಗಳನ್ನು ಆರ್ಥಿಕ ಅಗತ್ಯಗಳಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಕಾರ ಸಂಘಗಳ ದ.ಕ.ಜಿಲ್ಲಾ ಉಪನಿಬಂಧಕ ಬಿ.ಕೆ. ಸಲೀಂ ಮಾತನಾಡಿ, ಜನರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಆರಂಭವಾಗುವ ಸಹಕಾರಿ ಸಂಸ್ಥೆಗಳು ಪರಸ್ಪರ ನಂಬಿಕೆಯಾಧಾರದಲ್ಲಿ ಬೆಳೆಯುತ್ತವೆ. ದೇಶದಲ್ಲಿ ವಿವಿಧ ಸಮುದಾಯ, ಎಲ್ಲ ಸ್ತರದಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ದ.ಕ.ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಸ್ಥೆಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಬಂಟ್ವಾಳ ಕ್ರೆಡಿಟ್ ಕೋ-ಅಪರೇಟವ್ ಸೊಸೈಟಿ ಕೂಡ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಸಹಕಾರಿಗಳು ಒಂದಾದಾಗ ಎಲ್ಲ ಜಾತಿ, ವರ್ಗಕ್ಕೆ ಅನುಕೂಲವಾಗುತ್ತದೆ ಎಂದು ಶುಭ ಹಾರೈಸಿದರು.

ಬ್ಯಾಂಕಿನ ನಿರ್ದೇಶಕರಲ್ಲೊಬ್ಬರಾದ ಸುದರ್ಶನ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ನಾಡಿಮಿಡಿತವನ್ನು ಅರಿತವರಿಂದ ಈ ಸೊಸೈಟಿ ರಚನೆಯಾಗಿದ್ದು, ಮೊದಲ ದಿನವೇ ಉತ್ತಮ ಸ್ಪಂದನೆ ದೊರಕಿದೆ. ಎಸ್.ಬಿ ಅಕೌಂಟ್ ಪ್ರಾರಂಭಿಸಿದ್ದು, ಪಿಗ್ಮಿ ಸೌಲಭ್ಯವನ್ನೂ ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್ ಬ್ಯಾಂಕಿನ ಕುರಿತು ಮಾಹಿತಿ ನೀಡಿ, ಈಗಾಗಲೇ 608 ಸದಸ್ಯರು ಸೇರ್ಪಡೆಯಾಗಿ 8 ಲಕ್ಷ ರೂ. ಶೇರು ಸಂಗ್ರಹವಾಗಿದೆ. ನಿರಖು ಠೇವಣಿ ಸಹಿತ ಸೊಸೈಟಿ ಮೇಲೆ ವಿಶ್ವಾಸವಿಟ್ಟು, ಹಣ ಹೂಡಿಕೆ ಮಾಡುವವರು ಮುಂದೆ ಬಂದಿರುವುದು ಭವಿಷ್ಯದಲ್ಲಿ ಸೊಸೈಟಿ ಉತ್ತಮ ಪ್ರಗತಿಯನ್ನು ಪ್ರದರ್ಶಿಸುವುದಕ್ಕೆ ದಿಕ್ಸೂಚಿಯಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತಗೊಂಡು, ಆಭರಣ, ಸಾಲ, ವಾಹನ ಸಾಲ, ಕೃಷಿಯೇತರ ಸಾಲ ಸೌಲಭ್ಯಗಳಿವೆ ಎಂದರು.

ವೇದಿಕೆಯಲ್ಲಿ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಕ್ಕಾರು ಮೋನಪ್ಪ ಶೆಟ್ಟಿ, ಸಹಕಾರ ಸಂಘಗಳ ಸಹಕಾರಿ ಅಭಿವೃದ್ಧಿ ಅಧಿಕಾರಿ ತ್ರಿವೇಣಿ, ಸಲಹಾ ಸಮಿತಿ ಸದಸ್ಯ ಬಿ.ಎಚ್.ಖಾದರ್, ಪ್ರಕಾಶ್ ಕಾರಂತ್, ಉಪಾಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಆಡಳಿತ ಮಂಡಳಿ ನಿರ್ದೇಶಕರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಸುದರ್ಶನ ಜೈನ್, ಬಿ.ಎಂ.ಅಬ್ಬಾಸ್ ಅಲಿ, ಮಂಜುಳಾ ಮಾಧವ ಮಾವೆ, ವಾಣಿ ಪ್ರಕಾಶ ಕಾರಂತ, ಪಿಯೂಸ್ ಎಲ್. ರೋಡ್ರಿಗಸ್, ನಾರಾಯಣ ನಾಯಕ್, ಆಲ್ಫೋನ್ಸ್ ಮಿನೇಜಸ್, ಅಮ್ಮು ಅರ್ಬಿಗುಡ್ಡೆ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಬ್ಯಾಂಕ್ ಶಾಖೆ, ಕಂಪ್ಯೂಟರ್, ಲಾಕರ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಬಿಲ್ಲವ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಹಾಜರಿದ್ದರು. ಪ್ರಥಮ ನಿರಖು ಠೇವಣಿ ರಶೀದಿ ಪ್ರಥಮ ಉಳಿತಾಯ ಖಾತೆಯ ಪತ್ರ,, ಪಾಲು ಬಂಡವಾಳ ಪತ್ರವನ್ನು ವಿತರಿಸಲಾಯಿತು. ಕಟ್ಟಡಕ್ಕೆ ದುಡಿದ ಇಂಜಿನಯರ್ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕ, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ ಸ್ವಾಗತಿಸಿದರು. ಮತ್ತೋರ್ವ ನಿರ್ದೇಶಕ ಎಂ.ಎಸ್.ಮುಹಮ್ಮದ್ ವಂದಿಸಿದರು. ರಂಗಕಲಾವಿದ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News