ಕಲ್ಲಡ್ಕ ಶಾಲೆಯಲ್ಲಿ ಮಳೆಕೊಯ್ಲು ಘಟಕದ ಉದ್ಘಾಟನೆ

Update: 2019-07-15 16:45 GMT

ಬಂಟ್ವಾಳ, ಜು. 15: ಜಲಸಂರಕ್ಷಣೆಯನ್ನು ಉತ್ತೇಜಿಸುವುದಕ್ಕಾಗಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಮಳೆಕೊಯ್ಲು ಘಟಕದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.

ಬಾಳ್ತಿಲ ಗ್ರಾಮದ ಅಧ್ಯಕ್ಷ ವಿಠ್ಠಲ್ ನಾಯ್ಕ್ ಈ ಸಂದರ್ಭ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದ್ದು, ಭವಿಷ್ಯದಲ್ಲಿ ನೀರಿನ ಹಾಹಕಾರಕ್ಕೆ ಪರಿಹಾರವಾಗಿ ಈಗಿನಿಂದಲೇ ಪ್ರತಿ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು. ಪ್ರಸ್ತುತ ಜನರಲ್ಲಿ ಮಾಹಿತಿ ಹಾಗೂ ಆಸಕ್ತಿಯ ಕೊರತೆಯಿಂದ ಜೀವಜಲ ಸಮುದ್ರ ಸೇರುತ್ತಿದೆ. ಇಂತಹ ಸಂಗತಿಯನ್ನು ಮನಗಂಡ ಶ್ರೀರಾಮ ಶಾಲೆಯಲ್ಲಿ ಮಳೆಕೊಯ್ಲು ಆರಂಭಿಸಿದ್ದು, ಇದು ಶಾಲೆ ಮಾತ್ರವಲ್ಲದೇ ಬಾಳ್ತಿಲ ಗ್ರಾಮಕ್ಕೇ ಹೆಮ್ಮೆ  ತರುವ ಸಂಗತಿ ಎಂದು ಹೇಳಿದರು.

ಮಳೆ ಕೊಯ್ಲು ವೈಯುಕ್ತಿಕವಾಗಿ ಅಳವಡಿಸಿಕೊಳ್ಳಲು ಖಾಸಗಿ ಬೋರುವೆಲ್‍ಗಳಿಗೆ ಜಲಪೂರಣ ಹಾಗೂ ಕೃಷಿ ಹೊಂಡದಂತಹ ಕಾರ್ಯಕ್ಕೆ ನರೇಗಾದಡಿಯಲ್ಲಿ ಸಿಗುವ ಅನುದಾನದ ಬಗ್ಗೆ ವಿಠ್ಠಲ್ ನಾಯ್ಕ್ ರವರು ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದಲ್ಲಿಯೂ ಅಳವಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‍ನಿಂದ ಸಿಗುವ ಎಲ್ಲಾ ಸಹಕಾರವನ್ನು ಒದಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀಗೋಪಾಲಾಚಾರ್, ಕುಲ್ಯಾರು ನಾರಾಯಣ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಶಾಲೆಯ ಕುಡಿಯುವ ನೀರಿನ ಉಸ್ತುವಾರಿ ಸುಧನ್ವ ಶಾಸ್ತ್ರೀ ಹಾಗೂ ಶಾಲಾ ಮುಖ್ಯಶಿಕ್ಷಕ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವೇದಾವತಿ ಸ್ವಾಗತಿಸಿ, ರೇಷ್ಮಾ ವಂದಿಸಿದರು. ಶಾಲಾ ಅಧ್ಯಾಪಕ ಸುಮಂತ್ ಆಳ್ವ ನಿರೂಪಿಸಿದರು.

ಮಳೆ ನೀರು ಕೊಯ್ಲು

ಜಲಶಕ್ತಿ ಅಭಿಯಾನಕ್ಕೆ ಪೂರಕವಾಗಿ ಹನಿ, ಹನಿ ನೀರೂ ಪೋಲಾಗದಂತೆ ಶಾಲಾ ಕಟ್ಟಡದ ಮೇಲ್ಛಾವಣಿಗೆ ತಡೆಗೋಡೆ ನಿರ್ಮಿಸಿ 1 ಲಕ್ಷ ಲೀ.ನಷ್ಟು ನೀರು ಸಂಗ್ರಹಿಸಲಾಗಿದೆ. ಇದನ್ನು ಇದ್ದಿಲು, ಮರಳು ಹಾಗೂ ಜಲ್ಲಿ ಬಳಸಿ ಮಾಡಿದ ಸಾಂಪ್ರದಾಯಿಕ ಶುದ್ಧೀಕರಣ ಘಟಕದ ಮೂಲಕ ನೀರನ್ನು ಸಂಪ್‍ಗೆ ಹಾಯಿಸಲಾಗತ್ತದೆ.

ಹೆಚ್ಚುವರಿ ನೀರು ಸಂಗ್ರಹಕ್ಕಾಗಿಯೇ 1.25 ಲಕ್ಷ ಲೀ. ಸಾಮಥ್ರ್ಯದ ಪ್ರತ್ಯೇಕ ಸಂಪನ್ನು ಶಾಲಾ ಆವರಣದೊಳಗೆ ನಿರ್ಮಿಸಲಾಗಿದೆ. ಇದಲ್ಲದೆ ಸಂಪು ಭರ್ತಿಯಾದ ನಂತರ 2 ಎಚ್.ಪಿ ಪಂಪ್‍ನ ಮೂಲಕ ನೀರು ಶೇಖರಿಸಲು 5 ಸಾವಿರ ಲೀ.ನ ಪ್ರತ್ಯೇಕ ಟ್ಯಾಂಕ್‍ನ ವ್ಯವಸ್ಥೆ ಮಾಡಲಾಗಿದೆ.

ಈ ಮಳೆಕೊಯ್ಲು ಘಟಕದ ಮೂಲಕ ಅಲ್ಪ ಮಳೆಯಾದರೂ ಸಾಕಷ್ಟು ನೀರಿನ ಸಂಗ್ರಹವಾಗುತ್ತದೆ. ಅದಲ್ಲದೆ, ಮಳೆಗಾಲದಲ್ಲಿ ಕೊಳವೆ ಬಾವಿಯನ್ನು ಉಪಯೋಗಿಸಿದ ರೀತಿಯಲ್ಲಿ ನೀರಿನ ಸದ್ಭಳಕೆಯನ್ನು ಮಾಡಲಾಗುತ್ತದೆ. ಈ ಮೂಲಕ ಮಳೆಗಾಲ ಪೂರ್ತಿಯಾಗಿ ಯಾವುದೇ ಅಂತರ್ಜಲವನ್ನು ಬಳಸದ ರೀತಿಯಲ್ಲಿ ಯೋಜಿಸಲಾಗಿದೆ. ಮೊದಲ ಹಂತದ ಯೋಜನೆಗೆ ಶಾಲಾ ಪೋಷಕರಿಂದ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆಯನ್ನು ಪಡೆದು ಮುಂದಿನ ಹಂತದಲ್ಲಿ ವಿದ್ಯಾಕೇಂದ್ರದ ಎಲ್ಲಾ ವಿಭಾಗಕ್ಕೂ ಸಮರ್ಪಕವಾಗಿ ಬಳಸಿಕೊಳ್ಳುವ ಚಿಂತನೆ ಕೈಗೊಳ್ಳಲಾಗಿದೆ.

ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಜಲಸಂರಕ್ಷಣೆಗಾಗಿ ಆದ್ಯತೆ ಕೊಡಬೇಕು ಎನ್ನುವುದೇ ಸಂಸ್ಥೆಯ ಹಿರಿಯರ ಆಶಯ ಎಂದು ಶಾಲಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News