ದ.ಕ.ಜಿಲ್ಲೆಯಲ್ಲಿ ಮಲೇರಿಯಾ-ಡೆಂಗ್ ರೋಗಗಳ ಹಾವಳಿ

Update: 2019-07-15 16:56 GMT

ಮಂಗಳೂರು, ಜು.15: ದ.ಕ. ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ ಸಹಿತ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ರೋಗಗಳ ತಡೆಗೆ ಹರಸಾಹಸ ಪಡುತ್ತಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಜಾಸ್ತಿ ಇದ್ದರೂ ಕೂಡ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡದ ಕಡೆ ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಅದರ ಪರಿಣಾಮವಾಗಿ ಹಲವು ಮಂದಿ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸೊಳ್ಳೆ ಹಾವಳಿ ಜಾಸ್ತಿ ಇರುವ ಕಡೆ ಫಾಗಿಂಗ್ ಮಾಡಲಾಗುತ್ತದೆ. ಕಳೆದೊಂದು ವಾರದಿಂದ ಫಾಗಿಂಗ್ ಕೆಲಸ ಬಿರುಸುಗೊಳಿಸಲಾಗಿದೆ. ಅಲ್ಲಲ್ಲಿ ಶಿಬಿರಗಳನ್ನು ಏರ್ಪಡಿಸಿ, ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ.

ಶಾಲಾ-ಕಾಲೇಜು, ವಸತಿ ಸಮುಚ್ಚಯ, ಹಾಸ್ಟೆಲ್‌ಗಳ ಸುತ್ತಮುತ್ತ ಮತ್ತು ಕೊಳಚೆ ನೀರು ನಿಲ್ಲುವ ಕಡೆಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವು ಕೆಲಸ ಮಾಡುತ್ತಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 649 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದರೆ, ಈ ವರ್ಷ ಅದರ ಸಂಖ್ಯೆ 739 ಆಗಿದೆ. ಅದೇ ರೀತಿ ಕಳೆದ ವರ್ಷ ಡೆಂಗ್ ಪ್ರಕರಣ 584 ಇದ್ದರೆ, ಈ ಬಾರಿ ಅದು 319 ಆಗಿದೆ.

- ಡೆಂಗ್-ಮಲೇರಿಯಾ ಸಾಂಕ್ರಾಮಿಕ ರೋಗವಾದ ಕಾರಣ ಮುನ್ನೆಚ್ಚರಿಕೆ ವಹಿಸಬೇಕು. ಆದರೆ, ಗಾಬರಿಯಾಗಬಾರದು.

- ತಲೆಸುತ್ತು/ಗಂಟು ನೋವು/ವಸಡು-ಮಲದಲ್ಲಿ ರಕ್ತ/ಜ್ವರದ ಲಕ್ಷಣ ಕಾಣಿಸಿಕೊಂಡ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

- ಮನೆಯ ಸುತ್ತಮುತ್ತ, ಪರಿಸರದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.

- ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ, ಕೊಳಚೆ ಉಂಟಾಗದಂತೆ ಅಗತ್ಯ ಗಮನ ಹರಿಸಬೇಕು.

ರೇಶನಿಂಗ್ ನೀರು ಶೇಖರಿಸಿದ್ದು ಕಾರಣ ?

- ಬೇಸಿಗೆಯಲ್ಲಿ ನೀರಿನ ಅಭಾವವಿರುವುದರಿಂದ ಮಂಗಳೂರು ನಗರಕ್ಕೆ ರೇಶನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆ ಹಿನ್ನಲೆಯಲ್ಲಿ ನೀರನ್ನು ಪಾತ್ರೆ, ಡ್ರಮ್, ಬಕೆಟ್‌ಗಳಲ್ಲಿ ಸಂಗ್ರಹಿಸಿಡತೊಡಗಿದ್ದರು. ಹೀಗೆ ಸಂಗ್ರಹಿಸಿಟ್ಟ ನೀರು ಉಳಿಕೆಯಾಗಿದ್ದು, ಮಳೆಗಾಲವಾದರೂ ನೀರನ್ನು ಚೆಲ್ಲಿ ಶುಚಿಗೊಳಿಸದ್ದರಿಂದ ಡೆಂಗ್, ಮಲೇರಿಯಾ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- ಹಗಲು ಬಿಸಿಲು, ರಾತ್ರಿ ಮಳೆ ಸುರಿಯುವ ವಾತಾವರಣವೂ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಯಾಗುವುದರಿಂದ ಮತ್ತು ಕೊಳಚೆ ನೀರಿನ ನಿಲುಗಡೆಯಿಂದ ಡೆಂಗ್-ಮಲೇರಿಯಾ ಸೊಳ್ಳೆ ಹುಟ್ಟುತ್ತಿವೆ.

- ಯಾವ್ಯಾವ ಕಡೆ ನೀರು ನಿಲ್ಲುತ್ತದೆ ಮತ್ತು ಅಲ್ಲಿ ರೋಗ ಹರಡುವ ಸಾಧ್ಯತೆಯನ್ನು ಅವಲೋಕಿಸಿ ಕ್ರಮ ಜರುಗಿಸಲಾಗುತ್ತದೆ. ಅಂದರೆ ಶಂಕಿತ ಮಲೇರಿಯಾ ಮತ್ತು ಡೆಂಗ್ ಬಾಧಿತ ಪ್ರದೇಶಗಳಲ್ಲಿ ಫಾಗಿಂಗ್ ನಡೆಸಲಾಗಿದೆ. ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗಿದೆ.

ಡಾ. ನವೀನ್‌ಚಂದ್ರ ಕುಲಾಲ್, ಮಲೇರಿಯಾ ನಿಯಂತ್ರಣಾಧಿಕಾರಿ, ದ.ಕ.ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News