ಅಖಿಲ ಭಾರತ ಮುಂಡಾಲ ಯುವ ವೇದಿಕೆ ಪ್ರತಿಭಟನೆ

Update: 2019-07-15 16:59 GMT

ಮಂಗಳೂರು, ಜು.15: ಬ್ರಹ್ಮ ಬಲಾಂಡಿ ಯಕ್ಷಗಾನ ಪ್ರಸಂಗದಲ್ಲಿ ಬಬ್ಬು ಸ್ವಾಮಿಯ ಅಪಹಾಸ್ಯ ಮತ್ತು ಮುಂಡಾಳ ಜಾತಿಯನ್ನು ನಿಂದಿಸಿರುವ ಪ್ರಸಂಗವನ್ನು ಶಾಶ್ವತವಾಗಿ ನಿಷೇಧಗೊಳಿಸಬೇಕು ಮತ್ತು ಜಾತಿ ನಿಂದನೆಗೈದ ಆರೋಪಿತ ಪೂರ್ಣೇಶ್ ಆಚಾರ್ಯ ನೇತೃತ್ವದಲ್ಲಿ ಯಾವುದೇ ಯಕ್ಷಗಾನ ಪ್ರದರ್ಶನ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಪೂರ್ಣೇಶ್ ಆಚಾರ್ಯ ಸಂಯೋಜನೆಯಲ್ಲಿ ಶ್ರೀ ಯಕ್ಷಕಲಾ ಕಟೀಲು ಪ್ರಸ್ತುತ ಪಡಿಸುವ ಅನಂತರಾಮ ಬಂಗಾಡಿ ವಿರಚಿತ ‘ಬ್ರಹ್ಮ ಬಲಾಂಡಿ’ ತುಳು ಯಕ್ಷಗಾನವು ಜು.20ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕರಪತ್ರದಲ್ಲಿ ಮುಂಡಾಲ ಜಾತಿಯನ್ನು ನಿಂದಿಸಲಾಗಿದೆ.

ಇದರ ವಿರುದ್ಧ ನೀಡಿದ ದೂರಿನಂತೆ ಪೂರ್ಣೇಶ್ ಆಚಾರ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣೇಶ್ ಆಚಾರ್ಯ ಉದ್ದೇಶಪೂರ್ವಕವಾಗಿ ಈ ಅವಹೇಳನಕಾರಿ ಪದ ಬಳಸಿದ್ದಾರೆ. ಇದು ಮುಂಡಾಲ ಜಾತಿಗೆ ಮಾತ್ರವಲ್ಲ, ಸಮಸ್ತ ಪರಿಶಿಷ್ಟರಿಗೆ ಮಾಡಿದ ಅವಹೇಳನವಾಗಿದೆ. ಕೃತ್ಯ ಎಸಗಿದ ಆರೋಪಿತರ ಪೈಕಿ ಒಬ್ಬಾತ ಕಾನೂನಿಗೆ ಗೌರವ ಕೊಡದೆ ಮತ್ತೆ ಮುಂಡಾಲ ಸಮಾಜವನ್ನು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಬ್ಬುಸ್ವಾಮಿಯ ಅಪಹಾಸ್ಯ ಮತ್ತು ಮುಂಡಾಲ ಜಾತಿಯನ್ನು ನಿಂದಿಸುವಂತಹ ದೃಶ್ಯವನ್ನು ತೋರಿಸುವ ಬ್ರಹ್ಮ ಬಲಾಂಡಿ ಯಕ್ಷಗಾನ ಪ್ರದರ್ಶನವನ್ನು ನಿಷೇಧಿಸಬೇಕು. ಪೂರ್ಣೇಶ್ ವಿರುದ್ಧ ಕ್ರಮ ಜರಗಿಸುವಲ್ಲಿ ನಿರ್ಲಕ್ಷ ತೋರಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸ ಬೇಕು, ಜಾತಿ ನಿಂದಿಸುವಂತಹ ಕೃತಿಗಳನ್ನು ಮುಟ್ಟುಗೋಲು ಹಾಕಬೇಕು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರಘುರಾಜ್ ಕದ್ರಿ, ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ್ ಕೊಂಚಾಡಿ, ಜಗದೀಶ್ ಪಾಂಡೇಶ್ವರ, ಕೆ.ಕೆ. ಪೇಜಾವರ, ರೋಹಿತ್ ಉಳ್ಳಾಲ್, ಗೋಕುಲದಾಸ್ ಮತ್ತಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News