ಉತ್ತರಪ್ರದೇಶದ ಬಿಜೆಪಿ ಶಾಸಕನ ಪುತ್ರಿ, ಪತಿಗೆ ಪೊಲೀಸ್ ರಕ್ಷಣೆ

Update: 2019-07-15 17:28 GMT

ಹೊಸದಿಲ್ಲಿ, ಜು. 15: ಉತ್ತರಪ್ರದೇಶದ ಬರೇಲಿಯ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಹಾಗೂ ಅವರ ಪತಿ ಅಜಿತೇಶ್ ಕುಮಾರ್ ಅವರಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಾಕ್ಷಿ-ಅಜಿತೇಶ್ ದಂಪತಿಯನ್ನು ಅಪಹರಿಸಲಾಗಿದೆ ಎಂಬ ವದಂತಿ ಹರಡಿದ ಗಂಟೆಯ ಬಳಿಕ ಈ ಘಟನೆ ನಡೆದಿದೆ.

ಸಾಕ್ಷಿ (23) ಹಾಗೂ ಅಜಿತೇಶ್ ಅವರ ವಿವಾಹ ಸಿಂಧು ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್, ದಂಪತಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ. ಹೈಕೋರ್ಟ್‌ನ ಗೇಟ್ ನಂಬರ್ 3 ಎಯಲ್ಲಿ ಸಾಕ್ಷಿ-ಅಜಿತೇಶ್ ದಂಪತಿ ನಿಂತುಕೊಂಡಿದ್ದಾಗ ಅಪರಿಚಿತ ದುಷ್ಕರ್ಮಿಗಳು ಬಂದೂಕು ತೋರಿಸಿ ಅವರನ್ನು ಅಪಹರಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಇನ್ನೊಂದು ದಂಪತಿಯನ್ನು ಅಪಹರಿಸಿರುವುದು ಬೆಳಕಿಗೆ ಬಂತು. ಅವರು ಕೂಡ ವಿವಾಹವಾದ ಬಳಿಕ ರಕ್ಷಣೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಬಂದಿದ್ದರು. ಅಜಿತೇಶ್‌ನೊಂದಿಗೆ ಸಾಕ್ಷಿಯ ವಿವಾಹ ಜುಲೈ 4ರಂದು ಜನಪ್ರಿಯ ರಾಮ ಜಾನಕಿ ದೇವಾಲಯದಲ್ಲಿ ನಡೆದಿತ್ತು. ಆದರೆ, ಈ ವಿವಾಹ ಸಂಪ್ರದಾಯಬದ್ಧವಾಗಿ ನಡೆಸಿರುವುದನ್ನು ದೇವಾಲಯದ ಪುರೋಹಿತ ನಿರಾಕರಿಸಿದ್ದರು.

ಜುಲೈ 10ರಂದು ಸಾಕ್ಷಿ ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿ ಕಳೆದ ವಾರ ಅಜಿತೇಶ್‌ನೊಂದಿಗೆ ನಡೆದ ವಿವಾಹವನ್ನು ದೃಢಪಡಿಸಿದ್ದರು. ದಂಪತಿ ರಕ್ಷಣೆ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News