ಅಂಧರು ನೋಟುಗಳನ್ನು ಗುರುತಿಸಲು ಶೀಘ್ರದಲ್ಲಿ ವಿಶೇಷ ಆ್ಯಪ್

Update: 2019-07-15 17:37 GMT

ಹೊಸದಿಲ್ಲಿ, ಜು. 13: ಕರೆನ್ಸಿ ನೋಟುಗಳನ್ನು ಗುರುತಿಸಲು ಅಂಧ ವ್ಯಕ್ತಿಗಳಿಗೆ ನೆರವು ನೀಡುವ ಅಪ್ಲಿಕೇಶನ್ ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಗೊಳಿಸಲು ಆರ್‌ಬಿಐ ಫೆಬ್ರವರಿಯಲ್ಲಿ ನಾಲ್ವರು ತಜ್ಞರ ಸಮಿತಿ ರೂಪಿಸಿದೆ ಎಂದು ಬಾಂಬೆ ಹೈಕೋರ್ಟ್‌ನ ಪೀಠಕ್ಕೆ ಆರ್‌ಬಿಐ ಪರ ಹಿರಿಯ ನ್ಯಾಯವಾದಿ ಶ್ಯಾಮ್ ಮೆಹ್ತಾ ತಿಳಿಸಿದ್ದಾರೆ.

ಭಾರತದಲ್ಲಿ ಚಲಾವಣೆಯಲ್ಲಿ ಇರುವ 100 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ಮುಖಬೆಲೆಯ ಹೊಸ ನೋಟುಗಳು ಅಂಧರು ಗುರುತಿಸಲು ಸಾಧ್ಯವಾಗುವಂತೆ ಸ್ಪರ್ಶ ಗುರುತು ಹಾಗೂ ಉಬ್ಬುಗಳನ್ನು ಹೊಂದಿದೆ. ಆದರೆ, ಬಳಕೆಯಿಂದ ಈ ಗುರುತು ಹಾಗೂ ಉಬ್ಬು ಮಸುಕಾಗುತ್ತದೆ. ಮೊಬೈಲ್‌ಗಳಲ್ಲಿ ಉಚಿತವಾಗಿ ದೊರಕುವ ಈ ನೂತನ ಸಾಫ್ಟ್‌ವೇರ್ ಅಂಧರಿಗೆ ನೆರವು ನೀಡಲಿದೆ ಎಂದು ಆರ್‌ ಬಿಐ ಪರ ವಕೀಲರು ಹೇಳಿದ್ದಾರೆ.

ಹೊಸ ನೋಟುಗಳು ಹಾಗೂ ನಾಣ್ಯಗಳ ವ್ಯತ್ಯಾಸ ಸ್ಪರ್ಶಿಸಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಹೊಸ ನಾಣ್ಯ ಹಾಗೂ ನೋಟುಗಳಲ್ಲಿ ವಿಶಿಷ್ಟ ಲಕ್ಷಣಗಳನ್ನು ಒಳಗೊಳಿಸುವಂತೆ ಕೋರಿ ನ್ಯಾಶನಲ್ ಅಸೋಸಿಯೇಶನ್ ಆಫ್ ಬ್ಲೈಂಡ್ ಸಲ್ಲಿಸಿದ ದೂರಿನ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News