×
Ad

ಮುಖ್ಯ ನ್ಯಾಯಾಧೀಶರಾಗಿ ಕುರೇಶಿ ನೇಮಕ ವಿಳಂಬ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

Update: 2019-07-15 23:35 IST

ಹೊಸದಿಲ್ಲಿ, ಜು.15: ನ್ಯಾ.ಅಕಿಲ್ ಎ ಕುರೇಶಿಯವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನೇಮಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿದೆ.

ಗುಜರಾತ್ ಹೈಕೋರ್ಟ್‌ನ ವಕೀಲರ ಸಂಸ್ಥೆ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾ. ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್‌ಗೆ ತಿಳಿಸಿತು. ನ್ಯಾ. ಕುರೇಶಿಯವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ಕೊಲಿಜಿಯಂ ಮೇ 10ರಂದು ಶಿಫಾರಸು ಮಾಡಿದ್ದು, ಈ ಕಡತಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡದೆ, ಜೂನ್ 7ರಂದು ನ್ಯಾ. ರವಿಶಂಕರ್ ಝಾ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿರುವ ಬಗ್ಗೆ ಅರವಿಂದ್ ದಾತಾರ್ ಸುಪ್ರೀಂಕೋರ್ಟ್‌ನ ಗಮನ ಸೆಳೆದರು.

ಮೇ 10ರ ಬಳಿಕ 18 ಇತರ ನ್ಯಾಯಾಧೀಶರನ್ನು ವಿವಿಧ ಹೈಕೋರ್ಟ್‌ಗಳಿಗೆ ನೇಮಕ ಮಾಡಲಾಗಿದೆ. ಆದರೆ ಕುರೇಶಿಯವರ ಕಡತವನ್ನು ಬಾಕಿ ಇರಿಸಿಕೊಳ್ಳಲಾಗಿದೆ. ಆದ್ದರಿಂದ ತಕ್ಷಣ ಕೊಲಿಜಿಯಂನ ಶಿಫಾರಸನ್ನು ಜಾರಿಗೊಳಿಸಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಹೇಳಿಕೆಯನ್ನು ಆಲಿಸಿದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News