ವಾಯುಸೇನೆ ಸೇರಲಿರುವ ಮಿರಾಜ್ 2000 ಪತನದಲ್ಲಿ ಮೃತಪಟ್ಟ ಪೈಲಟ್‌ ಪತ್ನಿ

Update: 2019-07-16 06:33 GMT
ಚಿತ್ರ ಕೃಪೆ: ANI

ಹೊಸದಿಲ್ಲಿ, ಜು.16: ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮಿರಾಜ್ 2000 ಯುದ್ಧ ವಿಮಾನ ಪರೀಕ್ಷಾರ್ಥ ಹಾರಾಟದ ವೇಳೆ ವಿಮಾನ ಪತನಗೊಂಡು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಅವರ ಪತ್ನಿ ಗರೀಮಾ ಅಬ್ರೋಲ್ ಅವರು ಸರ್ವಿಸಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. ತಮ್ಮ ದಿವಂಗತ ಪತಿಯಂತೆಯೇ ಭಾರತೀಯ ವಾಯುಸೇನೆ ಸೇರಲು ಅವರಿಗೆ ಈಗ ಸಾಧ್ಯವಾಗಲಿದೆ.

ತೆಲಂಗಾಣದ ದುಂಡಿಗಲ್ ನಲ್ಲಿರುವ ಏರ್ ಫೋರ್ಸ್ ಅಕಾಡಮಿಗೆ  ಗರೀಮಾ ಅಬ್ರೋಲ್ ಸೇರ್ಪಡೆಯಾಗಲಿದ್ದು, ಜನವರಿ 2020ರಲ್ಲಿ ಅವರು ಭಾರತೀಯ ವಾಯುಸೇನೆ ಸೇರಲಿದ್ದಾರೆಂದು ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ. ಗರೀಮಾ ಅಬ್ರೋಲ್ ಅವರನ್ನು ಅಸಾಮಾನ್ಯ ಮಹಿಳೆ ಎಂದು ತಮ್ಮ ಟ್ವೀಟ್ ನಲ್ಲಿ ಬಣ್ಣಿಸಿರುವ ಅವರು, ಗರೀಮಾ ತಮ್ಮ ಪತಿಯೊಂದಿಗಿದ್ದ ಹಳೆಯ ಫೋಟೋ ಹಾಗೂ ತರಬೇತಿ ನಂತರದ ಆಕೆಯ ಫೋಟೋ ಪೋಸ್ಟ್ ಮಾಡಿದ್ದಾರೆ.

ಫೆಬ್ರವರಿ 1ರಂದು ಮಿರಾಜ್ 2000 ಯುದ್ಧ ವಿಮಾನದ ಪರೀಕ್ಷಾ ಹಾರಾಟದ ಟೇಕ್ ಆಫ್ ಸಂದರ್ಭ ಉಂಟಾದ ಅವಘಡದಲ್ಲಿ ಸ್ಕ್ವಾಡ್ರನ್ ಲೀಡರ್ ಗಳಾದ ಸಮೀರ್ ಅಬ್ರೋಲ್ (33) ಹಾಗೂ ಸಿದ್ಧಾರ್ಥ ನೇಗಿ (31) ಮೃತಪಟ್ಟಿದ್ದರು. ಇಬ್ಬರು ಪೈಲಟ್ ಗಳೂ ವಿಮಾನದಿಂದ ಕೆಳಕ್ಕೆ ಜಿಗಿಯುವಲ್ಲಿ ಸಫಲರಾಗಿದ್ದರೂ ಅವರು ಬದುಕುಳಿಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News