ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

Update: 2019-07-16 12:47 GMT

ಮಂಗಳೂರು, ಜು.16: ಸುರತ್ಕಲ್  ಟೋಲ್‌ಗೇಟ್ ವಿರುದ್ಧ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಮಂಗಳವಾರ ಪ್ರತಿಭಟನೆ ನಡೆಸಿತು.

ಮುಂಜಾನೆಯೇ ಟೋಲ್‌ಗೇಟ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಸ್ಥಳೀಯ ವಾಹನಗಳಿಂದ ಪೊಲೀಸ್ ರಕ್ಷಣೆಯಲ್ಲಿ ಸುಂಕ ಸಂಗ್ರಹದ ವಿರುದ್ಧದ ಹೋರಾಟಕ್ಕೆ ನಮಗೆ ತಾತ್ಕಾಲಿಕ ಜಯ ಸಿಕ್ಕಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಧ್ಯಪ್ರವೇಶದಿಂದಾಗಿ ಬಲವಂತದ ಟೋಲ್ ಸಂಗ್ರಹಕ್ಕೆ ಅವಕಾಶವನ್ನು ಜಿಲ್ಲಾಡಳಿತ ನಿರಾಕರಿಸಿರುವುದು ಶ್ಲಾಘನೀಯ. ಮುಂದಿನ ಆದೇಶದವರಗೆ ಯಥಾಸ್ಥಿತಿ ಕಾಪಾಡಲು ಟೋಲ್ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಸೂಚಿಸಿದೆ ಎಂದರು.

ಸಚಿವ ಖಾದರ್‌ರಂತೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಅವರೂ ಕೂಡ ಕೇಂದ್ರಮಟ್ಟದಲ್ಲಿ ತನ್ನ ಜವಾಬ್ದಾರಿ ನಿರ್ವಹಿಸಿದರೆ ಟೋಲ್ಗೇಟ್ ಲೂಟಿಯನ್ನು ತಡೆಯಬಹುದಾಗಿದೆ ಎಂದು ಮುನೀರ್ ಕಾಟಿಪಳ್ಳ ನುಡಿದರು.

ಪೊಲೀಸ್ ಬಲದೊಂದಿಗೆ ಶುಲ್ಕ ವಸೂಲಿ ನಡೆಯುವ ಸಾಧ್ಯತೆ ಇತ್ತಾದರೂ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಟೋಲ್ ಸಂಗ್ರಹಿಸದಂತೆ ಆದೇಶಿಸಬೇಕು ಎಂದು ಸೂಚಿಸಿದ್ದರಿಂದ ಜಿಲ್ಲಾಡಳಿತ ಮುಂದಿನ ಆದೇಶ ಬರುವವರಗೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸದಂತೆ ತಿಳಿಸಿತು. ಈ ಹಿನ್ನಲೆಯಲ್ಲಿ ಸುಂಕ ಸಂಗ್ರಹದ ತೀರ್ಮಾನಕ್ಕೆ ಹಿನ್ನಡೆ ಉಂಟಾಗಿ ಕೆ.ಎ.19 ರಿಜಿಸ್ಟ್ರೇಶನ್ ವಾಹನಗಳು ಸುಂಕ ಪಾವತಿಸದೆ ನಿರಾತಂಕವಾಗಿ ಎಂದಿನಂತೆ ಓಡಾಡಿದವು. 9:30ಕ್ಕೆ ಪೊಲೀಸ್ ಅಧಿಕಾರಿಗಳ ಸಮ್ಮುಖ ಹೋರಾಟ ಸಮಿತಿಯವರನ್ನು ಭೇಟಿಯಾದ ಟೋಲ್ ಗುತ್ತಿಗೆದಾರರ ಪ್ರತಿನಿಧಿಗಳು ಜಿಲ್ಲಾಡಳಿತದ ಸೂಚನೆ ಬರುವವರಗೆ ಸುಂಕ ಸಂಗ್ರಹ ನಡೆಸುವುದಿಲ್ಲ ಎಂದು ಭರವಸೆ ನೀಡಿದರು.

ಈ ಸಂದರ್ಭ ಮಾತಾಡಿದ ಹೋರಾಟ ಸಮಿತಿ ಪ್ರಮುಖರು ಸ್ಥಳೀಯ ವಾಹನಗಳಿಗೆ ಸುಂಕ ವಿಧಿಸುವ ತೀರ್ಮಾನ ಶ್ಲಾಘನೀಯ. ಮುಂದೆ ಮತ್ತೆ ಟೋಲ್ ಸಂಗ್ರಹಿಸಿದರೆ ತಕ್ಷಣವೇ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸಮಿತಿಯ ಹೋರಾಟವು ಸ್ಥಳೀಯ ವಾಹನಗಳಿಗೆ ವಿನಾಯತಿ ನೀಡುವುದಕ್ಕೆ ಸೀಮಿತ ಅಲ್ಲ. ತಾತ್ಕಾಲಿಕ ನೆಲೆಯ ಟೋಲ್ಗೇಟನ್ನು ಅಲ್ಲಿಂದ ಎತ್ತಂಗಡಿ ಮಾಡುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನ ಜಾರಿಯಾಗಬೇಕು. ಅಕ್ಟೋಬರ್‌ನಲ್ಲಿ ಕೊನೆಗೊಳ್ಳುವ ಟೋಲ್ ಸಂಗ್ರಹದ ಗುತ್ತಿಗೆ ನವೀಕರಣಗೊಳ್ಳಬಾರದು ಎಂದು ಆಗ್ರಹಿಸಿ ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.

ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಮಾಜಿ ಕಾರ್ಪೊರೇಟರ್‌ಗಳಾದ ಪುರುಷೋತ್ತಮ ಚಿತ್ರಾಪುರ, ರೇವತಿ ಪುತ್ರನ್, ವಸಂತ ಬೆರ್ನಾಡ್, ಶ್ರೀನಾಥ್ ಕುಲಾಲ್, ಅಜ್ಮಲ್ ಅಹ್ಮದ್, ಮಕ್ಸೂದ್ ಬಿ.ಕೆ., ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ಪದಾಧಿಕಾರಿಗಳಾದ ಧನಂಜಯ ಮಟ್ಟು, ವಸಂತ ಬೆರ್ನಾಡ್, ಶಶಿಕಾಂತ್ ಶೆಟ್ಟಿ, ಶಾಲೆಟ್ ಪಿಂಟೊ, ಸದಾಶಿವ ಅಮೀನ್, ಉದಯ ಶೆಟ್ಟಿ, ಸುನಿಲ್ ಆಳ್ವ, ನಾರಾಯಣ, ಮ್ಯಾಕ್ಸಿ ಕ್ಯಾಬ್ ಟ್ಯಾಕ್ಸಿಮೆನ್ ಎಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ದಿನೇಶ್ ಕುಂಪಲ, ವಿಜಯ್ ಶಕ್ತಿನಗರ, ವಿಶಾಲ್ ಕುಂಪಲ, ಇಂಟಕ್ ಮುಖಂಡರಾದ ಸದಾಶಿವ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಹೋರಾಟ ಸಮಿತಿಯ ಪ್ರಮುಖರಾದ ರಮೇಶ್ ಟಿ.ಎನ್, ರಶೀದ್ ಮುಕ್ಕ, ಮೂಸಬ್ಬ ಪಕ್ಷಿಕೆರೆ, ಹರೀಶ್ ರಾವ್ ಪೇಜಾವರ, ಪ್ರಭಾಕರ ಶೆಟ್ಟಿ, ರಾಜೇಶ್ ಶೆಟ್ಟಿ ಪಡ್ರೆ, ಸಲೀಂ ಶ್ಯಾಡೋ ಮತ್ತಿತರರು ಹಾಜರಿದ್ದರು.

ಬಿಜೆಪಿಯೂ ಪ್ರತಿಭಟನೆ: ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸುವ ಸನಿಹದಲ್ಲೇ ಬಿಜೆಪಿಗರೂ ಕೂಡ ಪ್ರತಿಭಟನೆ ನಡೆಸಿ ಗಮನ ಸೆಳೆದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News