ಉಡುಪಿ ನಗರಸಭೆ ಬಿಜೆಪಿ ಸದಸ್ಯನಿಂದ ಆರೋಗ್ಯ ನಿರೀಕ್ಷಕರಿಗೆ ಹಲ್ಲೆ; ಆರೋಪ

Update: 2019-07-16 17:14 GMT

ಉಡುಪಿ, ಜು.16: ಉಡುಪಿ ನಗರಸಭೆ ಕಚೇರಿಯಲ್ಲಿ ಕರ್ತವ್ಯ ನಿರತ ಅಧಿಕಾರಿಯೊಬ್ಬರ ಮೇಲೆ ಬಿಜೆಪಿ ನಗರಸಭಾ ಸದಸ್ಯ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ ಎನ್ನಲಾದ ಘಟನೆ ಇಂದು ಬೆಳಗ್ಗೆ 11:15ರ ಸುಮಾರಿಗೆ ನಡೆದಿದೆ.

ಹಲ್ಲೆಯಿಂದ ಗಾಯಗೊಂಡಿರುವ ಉಡುಪಿ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಅತ್ತಿಮೊಗ್ಗೆ ನಿವಾಸಿ ಎ.ಜೆ. ಪ್ರಸನ್ನ ಕುಮಾರ್(30) ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಪೆ ವಡಭಾಂಡೇಶ್ವರ ವಾರ್ಡ್ ನಗರಸಭಾ ಚುನಾಯಿತ ಬಿಜೆಪಿ ಸದಸ್ಯ ಯೋಗೀಶ್ ಸಾಲ್ಯಾನ್ ತನ್ನ ವಾರ್ಡಿನ ಬೈಲಕೆರೆಯ ಒಳಚರಂಡಿ ಕಾಮಗಾರಿಯ ಕೆಲಸದ ವಿಚಾರವಾಗಿ ಸಿಟ್ಟುಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ.

ಬೈಲಕೆರೆಯ ಒಳಚರಂಡಿ ಕಾಮಗಾರಿಗಾಗಿ ತೆಗೆಯಲಾದ ಸ್ಲಾಬ್‌ನ್ನು ಬದಿಗೆ ಇಡುವಂತೆ ಯೋಗೀಶ್ ಸಾಲ್ಯಾನ್, ಪ್ರಸನ್ನ ಕುಮಾರ್‌ಗೆ ತಿಳಿಸಿದ್ದನು. ಆದರೆ ಸಿಬ್ಬಂದಿ ಕೊರತೆಯಿಂದ ಆ ಕೆಲಸವನ್ನು ಪ್ರಸನ್ನ ಮಾಡಿಸಿರಲಿಲ್ಲ. ಈ ವಿಚಾರ ಸಂಬಂಧ ಇಂದು ಬೆಳಗ್ಗೆ 10:30ರ ಸುಮಾರಿಗೆ ಪ್ರಸನ್ನ ಕುಮಾರ್ ಅವರ ಮೊಬೈಲ್‌ಗೆ ಕರೆ ಮಾಡಿ ಏಕವಚನ ಹಾಗೂ ಏರುಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿದ್ದನು ಎಂದು ದೂರಲಾಗಿದೆ.

ನಂತರ ನಗರಸಭೆಯ ಕಚೇರಿಗೆ ಆಗಮಿಸಿದ ಯೋಗೀಶ್ ಸಾಲ್ಯಾನ್ ಏಕಾಏಕಿ ಕಚೇರಿಗೆ ಬಂದು, ಕೈ ಮುಷ್ಠಿಯಿಂದ ಪ್ರಸನ್ನ ಕುಮಾರ್ ಅವರ ಬಲಕಣ್ಣಿಗೆ ಹೊಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಸನ್ನ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 332(ಸಾರ್ವಜನಿಕ ಅಧಿಕಾರಿಗೆ ಹಲ್ಲೆ), 353(ಸಾರ್ವಜನಿಕ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ) ಹಾಗೂ 504 (ಅವಾಚ್ಯ ಶಬ್ದಗಳಿಂದ ನಿಂದನೆ) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಜಿಲ್ಲಾಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮುಖಂಡರು, ಬಿಜೆಪಿ ನಗರಸಭಾ ಸದಸ್ಯರು, ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್, ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿದರು.

ಈ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಗೂಂಡಾ ಜನಪ್ರತಿನಿಧಿಗಳಿಂದ ಸರಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಮತ್ತು ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ. ಆ ಸಂಬಂಧ ಎಸ್ಪಿ ಜೊತೆ ಮಾತನಾಡಿರುವುದಾಗಿ ಪ್ರಮೋದ್ ಮಧ್ವರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿಸಿ, ಎಸ್ಪಿಗೆ ಕಾಂಗ್ರೆಸ್ ಮನವಿ

ಕ್ಷುಲ್ಲಕ ವಿಚಾರದಲ್ಲಿ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್‌ಗೆ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ ವಡಭಾಂಡೇಶ್ವರ ವಾರ್ಡಿನ ನಗರ ಸಭಾ ಸದಸ್ಯ ಯೋಗೀಶ್ ವಿ.ಸಾಲ್ಯಾನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರ ಗಿಸುವಂತೆ ಒತ್ತಾಯಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್ಪಿ ನಿಶಾ ಜೇಮ್ಸ್ ಅವರಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್,ಕಾಂಗ್ರೆಸ್ ಮುಖಂಡರಾದ ಜನಾರ್ದನ ಭಂರ್ಡಾಕರ್, ಹಬೀಬ್ ಅಲಿ, ಚಂದ್ರಿಕಾ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ನಾರಾಯಣ ಕುಂದರ್, ಆರ್.ಕೆ.ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಪಕ್ಷದಿಂದ ಶಿಸ್ತು ಕ್ರಮ: ಮಟ್ಟಾರ್

ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ವಿರುದ್ಧ ಪಕ್ಷದಿಂದ ಸೂಕ್ತ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಈ ರೀತಿಯ ಕೃತ್ಯ ಎಸಗಿದವರಿಗೆ ಪಕ್ಷ ಯಾವತ್ತೂ ಬೆಂಬಲ ನೀಡುವುದಿಲ್ಲ. ಶಾಸಕರು ಕೂಡ ನಾವು ಬೆಂಬಲ ನೀಡುವುದಿಲ್ಲ ಎಂದು ಹೇಳಿ ದ್ದಾರೆ. ಪಕ್ಷದ ನಗರಸಭಾ ಸದಸ್ಯರೊಬ್ಬರು ತಪ್ಪು ಮಾಡಿರುವುದಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಆರೋಪಿಗಾಗಿ ಶೋಧ

ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ಠಾಣಾ ಮಟ್ಟದಲ್ಲಿ ತಂಡವನ್ನು ರಚಿಸಿದ್ದು, ವಿವಿಧ ಕಡೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದು, ಈವರೆಗೆ ಬಂಧನ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

2018ರ ಸೆ.10ರಂದು ಭಾರತ್ ಬಂದ್ ವೇಳೆ ಉಡುಪಿ ಬನ್ನಂಜೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆ ಪ್ರಕರಣ ದಲ್ಲೂ ಯೋಗೀಶ್ ಸಾಲ್ಯಾನ್ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ. 

ಪಕ್ಷದಿಂದ ಅಮಾನತು: ಮಟ್ಟಾರ್

ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರಗಿಸಲಾಗಿದ್ದು, ಅವರನ್ನು ಪಕ್ಷದಿಂದ ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಇಂದು ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ರೀತಿಯ ಕೃತ್ಯ ಎಸಗಿದವರಿಗೆ ಪಕ್ಷ ಯಾವತ್ತೂ ಬೆಂಬಲ ನೀಡುವುದಿಲ್ಲ. ಶಾಸಕರು ಕೂಡ ನಾವು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷದ ನಗರಸಭಾ ಸದಸ್ಯರೊಬ್ಬರು ತಪ್ಪು ಮಾಡಿರುವುದಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News