ಸಂಸತ್ತು ಸಹಾಯಕ್ಕೆ ಬಳಕೆಯಾಗಬೇಕಿದೆ: ಪ್ರೊ.ಪಿ.ಎಸ್.ಯಡಪಡಿತ್ತಾಯ

Update: 2019-07-16 11:01 GMT

ಮಂಗಳೂರು, ಜು.16: ಸಂಸತ್ತು ಎನ್ನುವುದು ಒಂದು ಶಕ್ತಿ. ಅದನ್ನು ಇತರರಿಗೆ ಸಹಾಯ ಮಾಡುವುದಕ್ಕೆ ಬಳಸಬೇಕೇ ವಿನಹ ತೊಂದರೆ ನೀಡುವುದಕ್ಕಾಗಿ ಅಲ್ಲ. ಯುವಜನತೆ ತಮ್ಮ ಶಕ್ತಿಯನ್ನು ದೇಶವನ್ನು ಮುನ್ನಡೆಸುವುದಕ್ಕೆ ಉಪಯೋಗಿಸಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಿಸಿದ್ದಾರೆ.

ಅವರು ಇಂದು ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಯುವ ಸಂಸತ್‌ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಭಾರತದ ಸಂವಿಧಾನದ ಸ್ಫೂರ್ತಿ ಮತ್ತು ಆಶಯಗಳನ್ನು ಉಳಿಸುವುದಕ್ಕೆ ಯುವಜನರು ಬದ್ಧರಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಸಲಹೆ ನೀಡಿದರು.

ಪ್ರೊಬೇಷನರಿ ಸಹಾಯಕ ಆಯುಕ್ತ ರಾಹುಲ್ ಶಿಂಧೆ ಮಾತನಾಡಿ, ಯುವಜನರಿಗೆ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗದ ಪರಿಚಯ ಮಾಡಿಕೊಡಲು ಇಂತಹ ಯುವ ಸಂಸತ್ ಕಾರ್ಯಕ್ರಮ ಸಹಕಾರಿ ಎಂದರು.

ಅಧ್ಯಕ್ಷತೆಯನ್ನು ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ ವಹಿಸಿದ್ದರು. ಮಂಗಳೂರು ವಿವಿಯ ರಾಜಕೀಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಯುವ ಸಂಸತ್ ತರಬೇತುದಾರ ಪ್ರೊ.ದಯಾನಂದ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

 ದಿಲ್ಲಿಯಲ್ಲಿ ನಡೆಯುವ ಸಂಸತ್‌ನಂತೆಯೇ ಯುವ ಸಂಸತ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಆರಂಭದಲ್ಲಿ ಸ್ವಚ್ಛ ಭಾರತದ ಶಪಥ ಸ್ವೀಕರಿಸಲಾಯಿತು. ಬಳಿಕ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾರಂಭದಲ್ಲಿ ಸಂಸದರ ಪ್ರಮಾಣ ವಚನ, ಸಚಿವರ ಪದಗ್ರಹಣ, ಬಳಿಕ ನಿಧನದ ನಿಲುವಳಿ ಮಂಡನೆ ನಡೆದ ನಂತರ ಪ್ರಶ್ನೋತ್ತರ ಅವಧಿ, ಶೂನ್ಯ ಅವಧಿ ಹೀಗೆ ಸಂಸತ್ತಿನಲ್ಲಿ ನಡೆಯುವ ಎಲ್ಲ ಕಲಾಪಗಳು ಯುವ ಸಂಸತ್‌ನಲ್ಲಿ ಅನುಕರಣೆಗೊಂಡವು.

ಸದನದ ಒಂದು ಭಾಗದಲ್ಲಿ ಆಡಳಿತ ಪಕ್ಷದ ಸದಸ್ಯರು, ಇನ್ನೊಂದು ಭಾಗದಲ್ಲಿ ವಿಪಕ್ಷ ಸದಸ್ಯರು, ವಿದೇಶಿ ಗಣ, ಮಾಧ್ಯಮ ಹೀಗೆ ಪ್ರತ್ಯೇಕ ಭಾಗಗಳನ್ನಾಗಿ ಮಾಡಲಾಗಿತ್ತು.

ನೋಟ್ ರದ್ದತಿ, ಜಿಎಸ್‌ಟಿ ಮುಂತಾದ ವಿಚಾರಗಳ ಬಗ್ಗೆ ಯುವ ಸಂಸದರು ಚಿಂತನ ಮಂಥನ ನಡೆಸಿದರು

 ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ರಘುವೀರ್ ಸೂಟರ್ ಪೇಟೆ ಸ್ವಾಗತಿಸಿದರು. ವಿದ್ಯಾರ್ಥಿ ಅಕ್ಷಯ್ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News