ಬಜಾಲ್ ವಾರ್ಡ್ ಮಟ್ಟದ ಸಿಪಿಎಂ ಸಭೆ

Update: 2019-07-16 12:54 GMT

ಮಂಗಳೂರು, ಜು.16: ಸ್ಮಾರ್ಟ್‌ಸಿಟಿ ಯೋಜನೆಯಂತಹ ಹಲವು ಯೋಜನೆಗಳ ಮೂಲಕ ಕೋಟ್ಯಂತರ ಹಣವು ನಗರ ಪ್ರದೇಶಗಳಿಗೆ ಹರಿದು ಬರುತ್ತಿದ್ದು, ಇದರಿಂದಾಗಿ ಉನ್ನತ ಮಟ್ಟದ ಅಭಿವೃದ್ಧಿ ಕಾಣುವ ಬದಲು ಬಹುತೇಕ ಹಣವು ಭ್ರಷ್ಟಾಚಾರದಿಂದಾಗಿ ಗುಳುಂ ಆಗುತ್ತಿದೆ. ಇದರಿಂದ ನಗರದ ಅಭಿವೃದ್ಧಿಯಂತೂ ಮರೀಚಿಕೆಯಾಗಿದೆ. ಅಭಿವೃದ್ಧಿಯ ಬಗ್ಗೆ ವೈಜ್ಞಾನಿಕ ಕಣ್ಣೋಟವಿಲ್ಲದೆ ಅಲ್ಲಿಂದಲ್ಲಿಗೆ ಹಣವನ್ನು ಲಪಟಾಯಿಸಲಾಗುತ್ತಿದೆ. ಶಕ್ತಿನಗರದಲ್ಲಿ ಮೀಸಲಿರಿಸಿದ ಜಾಗದಲ್ಲಿ ಬಡವರಿಗೆ ಜಿ+3 ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಅರ್ಜಿ ಗಳನ್ನು ಪಡೆದು ಶಂಕುಸ್ಥಾಪನೆ ನೆರವೇರಿಸಿದರೂ ಇನ್ನೂ ಅರ್ಹರಿಗೆ ಮನೆ ನೀಡಿಲ್ಲ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

53ನೇ ಬಜಾಲ್ ವಾರ್ಡ್ ಮಟ್ಟದ ಸಿಪಿಎಂ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲೇ ಭೂಮಿ ಹೋರಾಟಕ್ಕೆ ನಾಂದಿ ಹಾಡಿದ ಕಮ್ಯುನಿಷ್ಟರು ಉಳುವವನೇ ಹೊಲದೊಡೆಯನೆಂಬ ಕಾನೂನು ದೇಶದಲ್ಲಿ ಜಾರಿಗೊಳ್ಳಲು ಪ್ರಮುಖ ಕಾರಣೀಕರ್ತರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಬಡವರಿಗೆ ಮನೆ ನಿವೇಶನ ನೀಡಬೇಕು ಎಂದು ದೇಶದ ಉದ್ದಗಲಕ್ಕೂ ಕಮ್ಯುನಿಷ್ಟರು ಹೋರಾಡುತ್ತಿದ್ದಾರೆ. ಮಂಗಳೂರು ನಗರದಲ್ಲೂ 5 ವರ್ಷಗಳಲ್ಲಿ ನಿರಂತರ ಹೋರಾಟದ ಮೂಲಕ ನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಸಾಧ್ಯವಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಬಿ.ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ಸಿಪಿಎಂ ಮುಖಂಡ ಕೇಶವ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುರೇಶ್ ಬಜಾಲ್, ಬಶೀರ್ ಜಲ್ಲಿಗುಡ್ಡೆ, ರೋಹಿಣಿ, ಮೋಹನ್, ದೀಪಕ್ ಬಜಾಲ್, ವರಪ್ರಸಾದ್, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News