ಕಡಬ ತಾಪಂ ಆಡಳಿತ ಮಂಡಳಿ ರಚನೆಗೆ ಸರ್ಕಾರದ ಅಧಿಸೂಚನೆ ಬಂದಿಲ್ಲ: ಎಸಿ

Update: 2019-07-16 13:26 GMT

ಪುತ್ತೂರು: ನೂತನ ಕಡಬ ತಾಲೂಕು ರಚನೆಗೊಂಡು ಕಡಬ ತಾಪಂ ರಚನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ನೂತನ ತಾಪಂ ಆಡಳಿತ ಮಂಡಳಿ ರಚಿಸುವ ಸಂಬಂಧ ಸರ್ಕಾರದಿಂದ ಇನ್ನೂ ಅಧಿಸೂಚನೆ ಬಂದಿಲ್ಲ ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರಸ್ತುತ ಕಡಬ ತಾಲೂಕು ಭಾಗದ ತಾಪಂ ಸದಸ್ಯರು ಪುತ್ತೂರು ತಾಪಂ ನಲ್ಲಿದ್ದಾರೆ. ಸರ್ಕಾರದಿಂದ ಅಧಿಕೃತ ಅಧಿಸೂಚನೆ ಬಂದ ಬಳಿಕ ಕಡಬ ತಾಲೂಕು ವ್ಯಾಪ್ತಿಯ ಸದಸ್ಯರ ಕಡಬ ತಾಪಂ ಆಡಳಿತ ಅಸ್ತಿತ್ವಕ್ಕೆ ಬರಲಿದೆ. ಅಲ್ಲಿ ತನಕ ಈಗಿನ ವ್ಯವಸ್ಥೆ ಮುಂದುವರಿಯಲಿದೆ. ಈಗಾಗಲೇ ಕಡಬ ತಾಪಂಗೆ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ ಮಂಜೂರಾಗಿ ನಾಗರಾಜಯ್ಯ ಎಂಬವರು ನೇಮಕಗೊಂಡಿದ್ದಾರೆ. ಹುದ್ದೆ ಸ್ವೀಕರಿಸಿದ ಬಳಿಕ ಕಡಬ ತಾಲೂಕಿಗೆ ಸಂಬಂಧಪಟ್ಟ ಕೆಲಸಗಳನ್ನು ಅವರು ಪುತ್ತೂರು ತಾಪಂ ಕಾರ್ಯನಿರ್ವಹಣಾ ಅಧಿಕಾರಿಯವರ ಸಹಯೋಗದೊಂದಿಗೆ ನಿರ್ವಹಿಸಲಿದ್ದಾರೆ. ಪುತ್ತೂರು ತಾಪಂ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅತ್ಯಾಚಾರ ಸಂತ್ರಸ್ತೆಗೆ ಪರಿಹಾರ

ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತೆಗೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ಬಾಲಕಿಗೆ ರೂ.50 ಸಾವಿರ ಪರಿಹಾರ ನೀಡಲಾಗಿದೆ. ರೂ. 2 ಲಕ್ಷ ಕೆಲವೇ ದಿನಗಳಲ್ಲಿ ಆಕೆಯ ಖಾತೆಗೆ ವರ್ಗಾವಣೆಯಾಗಲಿದೆ. ಎರಡನೇ ಹಂತದಲ್ಲಿ ಇನ್ನೂ ಎರಡೂವರೆ ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅವರು ತುಂಬಾ ಬಡವರಾಗಿದ್ದು, ಸರಿಯಾದ ಮನೆಯ ವ್ಯವಸ್ಥೆಯೂ ಅವರಿಲ್ಲ. ಹೀಗಾಗಿ ನೂತನ ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ತನ್ನಿಂದಾದ ಪ್ರಯತ್ನ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News