ಅಲ್ಪಸಂಖ್ಯಾತ ಕೈದಿಗಳ ಬಿಡುಗಡೆಗೆ ಕ್ರಮ: ಜಿ.ಎ. ಬಾವ

Update: 2019-07-16 16:16 GMT

ಮಂಗಳೂರು, ಜು.16: ರಾಜ್ಯದ ಎಲ್ಲ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಲ್ಪಸಂಖ್ಯಾತ ಕೈದಿಗಳ ಬಿಡುಗಡೆಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ಅಧ್ಯಕ್ಷ ಜಿ.ಎ.ಬಾವ ತಿಳಿಸಿದ್ದಾರೆ.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಸೇರಿದಂತೆ ಇತರ ಸಮುದಾಯಗಳ ಕೈದಿಗಳ ಬಿಡುಗಡೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದು ಕೇವಲ ಒಂದೇ ಬಾರಿ ಜೈಲಿಗೆ ಹೋದವರಿಗೆ ಮಾತ್ರ ಅನ್ವಯಿಸಲಿದೆ. ಒಂದಕ್ಕಿಂತ ಹೆಚ್ಚು ಬಾರಿ ಅಪರಾಧ ಪ್ರಕರಣ ಎದುರಿಸುತ್ತಿರು ವವರಿಗೆ ಅನ್ವಯಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸಣ್ಣಪುಟ್ಟ ಕಾನೂನುಬಾಹಿರ ಚಟುವಟಿಕೆ ಮಾಡಿದವರು, ‘ಅನುಮಾನಾಸ್ಪದ’ ಎಂದು ಪರಿಗಣಿಸಲ್ಪಟ್ಟವರು, ಸಣ್ಣಪುಟ್ಟ ಕಳವು ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ಆರೋಪಿಗಳು ಜೈಲು ಪಾಲಾಗಿರುತ್ತಾರೆ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಮೂರು ತಿಂಗಳಿಂದ ಆರು ತಿಂಗಳವರೆಗೆ ಶಿಕ್ಷೆ ಪ್ರಕಟಿಸುತ್ತಾರೆ. ಇಂತಹ ಕೈದಿಗಳು ಜಾಮೀನು ಪಡೆದರೂ ಬಡತನದ ಹಿನ್ನೆಲೆಯಲ್ಲಿ ಶೂರಿಟಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಮೂರು ತಿಂಗಳು ಜೈಲುಶಿಕ್ಷೆ ಅನುಭವಿಸುವವರು ಎರಡು ವರ್ಷವಾದರೂ ಇನ್ನೂ ಜೈಲಲ್ಲೇ ಇರುತ್ತಾರೆ. ಅಂತಹವರ ಬಿಡುಗಡೆ ಆಯೋಗ ಮುಂದಾಗಲಿದೆ ಎಂದರು.

ರಾಜ್ಯದ ಎಲ್ಲ ಜೈಲುಗಳಿಂದ ಅಲ್ಪಸಂಖ್ಯಾತ ಕೈದಿಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಅಂತಹವರ ಸಂಪೂರ್ಣ ಮಾಹಿತಿಯನ್ನು ಪ್ರತಿ ತಿಂಗಳು ಕಳುಹಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಂಥವರ ವಿವರಗಳನ್ನು ವಕೀಲರಿಗೆ ಮತ್ತು ಎನ್‌ಜಿಒಗಳಿಗೆ ನೀಡಿ ಬಿಡುಗಡೆಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೂ ಆಗಿರುವ ಜಿ.ಎ. ಬಾವ ತಿಳಿಸಿದರು.

ದುರುಪಯೋಗ ಸಾಧ್ಯತೆ: ಸಣ್ಣಪುಟ್ಟ ಅಪರಾಧ ಆರೋಪದ ಹಿನ್ನೆಲೆಯಲ್ಲಿ ಜೈಲುಪಾಲಾಗುವ ಆರೋಪಿಗಳು ಅವಧಿ ಬಳಿಕ ಜೈಲಿನಿಂದ ಹೊರ ಬರಬೇಕು. ಆದರೆ, ಜಾಮೀನು ದೊರೆತರೂ ಶೂರಿಟಿ ಸಿಗದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಉಳಿದುಕೊಂಡರೆ ಅಪಾಯ ಹೆಚ್ಚು. ಗಂಭೀರ ಪ್ರಕರಣದ ಕೈದಿಗಳು ಇಂತಹವರನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದರು.

ಇತ್ತೀಚೆಗೆ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ಆಯೋಗ ಭೇಟಿ ನೀಡಿತ್ತು. ಜೈಲಿನಲ್ಲಿ ವಿಚಾರಣಾಧೀನ ಹಾಗೂ ಶಿಕ್ಷೆ ಅನುಭವಿಸುತ್ತಿರುವ ಸುಮಾರು ನಾಲ್ಕು ಸಾವಿರ ಕೈದಿಗಳಿದ್ದಾರೆ. ಅವಧಿ ಬಳಿಕವೂ ಜೈಲಿನಿಂದ ಹೊರಬಾರಲು ಸಾಧ್ಯವಾಗದ ವಿಷಯ ತಿಳಿದುಬಂದಿತು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲೇ ಶೇ.35ರಷ್ಟು ಅಲ್ಪಸಂಖ್ಯಾತರಿದ್ದಾರೆ ಎಂದು ಜಿ.ಎ.ಬಾವ ಹೇಳಿದರು.

ನಗರದ ಹೊರವಲಯದ ನಾಟೆಕಲ್ ವಸತಿ ಶಾಲೆಯಲ್ಲಿ ಅತಿ ಕಡಿಮೆ ಶೇ.58ರಷ್ಟು ಫಲಿತಾಂಶ ಬಂದಿದೆ. ಫಲಿತಾಂಶ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಅಲ್ಲಿನ ಶಿಕ್ಷಕರಿಗೆ ಸೂಚಿಸಲಾಗಿದೆ. ಅಲ್ಲದೆ, ಅಲ್ಲಿ 250 ವಿದ್ಯಾರ್ಥಿಗಳಿರಬೇಕಾದಲ್ಲಿ ಕೇವಲ 65 ಮಂದಿ ಮಾತ್ರ ಇದ್ದಾರೆ. ಇದರಿಂದ ಸರಕಾರದ ಸೌಲಭ್ಯ ಅರ್ಹ ಬಡವರಿಗೆ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಮಾಡುವಂತೆಯೂ ಸೂಚಿಸಲಾಗಿದೆ. ಈ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿದ್ದು, ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆಯಿದೆ ಎಂದರು.

ನಗರದ ಚಿಲಿಂಬಿಯಲ್ಲಿರುವ ಪೋಸ್ಟ್ ಮೆಟ್ರಿಕ್ ವಸತಿ ನಿಲಯದ ಮಕ್ಕಳಿಗೆ ಆರೋಗ್ಯ ಸಂಬಂಧಿ ಏರುಪೇರಾದರೆ ಹತ್ತಿರ ಆಸ್ಪತ್ರೆಗಳಿಲ್ಲದೆ ತೊಂದರೆಯಾಗುತ್ತಿರುವ ಕುರಿತು ದೂರುಗಳು ಬಂದಿವೆ. ಅಲ್ಲಿ ಆಸ್ಪತ್ರೆ ಸವಲತ್ತಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿ.ಎ. ಬಾವ ತಿಳಿಸಿದರು.

ಸೈಂಟ್ ಜೋಸೆಫ್ ವೃದ್ಧಾಶ್ರಮಕ್ಕೆ ಸೂಕ್ತ ಅನುದಾನ ಬಾರದೆ ಸಮಸ್ಯೆಯಾಗಿದ್ದು, ಅದಕ್ಕೂ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಉಸ್ಮಾನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಫ್ವಾನ್ ಉಪಸ್ಥಿತರಿದ್ದರು.

ವಕ್ಫ್ ಆಸ್ತಿ ಒತ್ತುವರಿ ತೆರವು

ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಗಳು ಅನೇಕ ಕಡೆ ಒತ್ತುವರಿಯಾಗಿವೆ. 1968ರಲ್ಲಿ ವಕ್ಫ್ ಆಸ್ತಿಗಳ ಗೆಜೆಟ್ ನೋಟಿಫಿಕೇಶನ್ ಆಗಿದ್ದು, ಒಮ್ಮೆ ಘೋಷಣೆಯಾದ ವಕ್ಫ್ ಆಸ್ತಿ ಎಂದಿಗೂ ವಕ್ಫ್ ಆಸ್ತಿಯಾಗಿಯೇ ಉಳಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿಯಾದ ವಕ್ಫ್ ಆಸ್ತಿಗಳನ್ನು ಮರಳಿ ಪಡೆಯಲು ಆಯೋಗದಿಂದ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಮುಂದೆ ಹಂತಹಂತವಾಗಿ ಇಂತಹ ಪ್ರಕರಣಗಳನ್ನು ನಿರ್ವಹಿಸಲಿದ್ದೇವೆ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ ಹೇಳಿದರು.

‘ಅಲ್ಪಸಂಖ್ಯಾತರಿಗೆ ಅನ್ಯಾಯ’

ರಾಜ್ಯದ ಎಲ್ಲ ಇಲಾಖೆಗಳಲ್ಲೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಆಯಾ ಇಲಾಖೆಗಳಿಂದ ಪ್ರತಿ ತಿಂಗಳು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಪರಿಶೀಲನೆ ನಡೆಸಲಾಗುವುದು. ಇಂತಹ ಪ್ರಕರಣಗಳಲ್ಲಿ ಅನ್ಯಾಯವಾಗುತ್ತಿರುವುದು ಸಾಬೀತಾದಲ್ಲಿ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News