​ಈ ವಿಮಾನ ಇಳಿದಾಗ ಉಳಿದಿದ್ದ ಇಂಧನ ಎಷ್ಟೆಂದು ತಿಳಿದರೆ ಗಾಬರಿಯಾಗುತ್ತೀರಿ..!

Update: 2019-07-17 03:40 GMT

ಹೊಸದಿಲ್ಲಿ: ಮುಂಬೈಯಿಂದ ದೆಹಲಿಗೆ 153 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಸ್ತಾರ ಏರ್‌ಲೈನ್ಸ್ ವಿಮಾನ, ಸುಮಾರು ಮೂರೂವರೆ ಗಂಟೆ ಕಾಲ ಆಕಾಶದಲ್ಲಿ ಅತಂತ್ರವಾಗಿ ಹಾರಾಡಿ ಕೊನೆಗೆ ಐದು ನಿಮಿಷಗಳಿಗೆ ಸಾಕಾಗುವಷ್ಟೇ ಇಂಧನ ಇದ್ದ ಹಂತದಲ್ಲಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಘಟನೆ ಬೆಳಕಿಗೆ ಬಂದಿದೆ.

ಮುಂಬೈನಿಂದ ಬಂದು ದೆಹಲಿ ವಿಮಾನ ನಿಲ್ದಾಣದ ಮೇಲೆ ಹಾರಾಡಿದ ವಿಮಾನವನ್ನು ಲಕ್ನೋಗೆ ತಿರುಗಿಸಲಾಯಿತು. ಬಳಿಕ ಅಲಹಾಬಾದ್‌ಗೆ ಕಳುಹಿಸಲಾಯಿತು. ಕೊನೆಗೆ ಅಸ್ಪಷ್ಟ ಗೋಚರದ ಸಮಸ್ಯೆಯಿಂದ ಪಾರಾಗುವ ಸಲುವಾಗಿ ಲಕ್ನೋದಲ್ಲಿ ವಿಮಾನ ಇಳಿಸಲಾಯಿತು.

ಲಕ್ನೋದಿಂದ ಅಲಹಾಬಾದ್‌ನ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ 200 ಕಿಲೋಮೀಟರ್ ದೂರವಿದ್ದು, ಇಷ್ಟು ಹಾರಾಟಕ್ಕೆ ಸಾಕಾಗುವಷ್ಟು ಇಂಧನ ವಿಮಾನದಲ್ಲಿ ಇಲ್ಲದ ಕಾರಣ ಲಕ್ನೋದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯುವ ಮೂಲಕ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.

"ವಿಮಾನ ಇಳಿದಾಗ ಅದರಲ್ಲಿ ಕೇವಲ 200 ಕೆಜಿ ಅಥವಾ ಐದು ನಿಮಿಷಗಳಿಗೆ ಸಾಕಾಗುವಷ್ಟು ಇಂಧನ ಉಳಿದಿತ್ತು. ಅಲಹಾಬಾದ್ ರನ್‌ವೇ ಲಕ್ನೋದಿಂದ ಸುಮಾರು 30 ನಿಮಿಷಗಳ ಪ್ರಯಾಣದ ಅಂತರದಲ್ಲಿದೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿಮಾನ ಮಧ್ಯಾಹ್ನ 2.40ಕ್ಕೆ ಮುಂಬೈನಿಂದ 8500 ಕೆಜಿ ಇಂಧನ ತುಂಬಿಕೊಂಡು ಹೊರಟಿತ್ತು.

ಮುಂಬೈ- ದೆಹಲಿ ವಿಮಾನಯಾನದ ಅವಧಿ ಎರಡು ಗಂಟೆಗಿಂತಲೂ ಕಡಿಮೆ. ವಿಮಾನಯಾನ ಮಹಾನಿರ್ದೇಶಕರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಇಬ್ಬರು ಪೈಲಟ್‌ಗಳನ್ನು ವಜಾ ಮಾಡಿದ್ದಾರೆ.

ಹಿರಿಯ ಪೈಲಟ್ ಒಬ್ಬರು ಹೇಳುವಂತೆ, "ಆ ವಿಮಾನ ಸುರಕ್ಷಿತವಾಗಿ ಇಳಿದದ್ದು ಪವಾಡ. ಎಲ್ಲರನ್ನೂ ಕಾಡುವ ದೊಡ್ಡ ಪ್ರಶ್ನೆ ಎಂದರೆ, ವಿಮಾನದ ಪೈಲಟ್‌ಗಳು ದೆಹಲಿಯಿಂದ ವಿಮಾನವನ್ನು ವಾಪಾಸು ಕಳುಹಿಸಿದ ಬಳಿಕ ಲಕ್ನೋದಲ್ಲಿ ಏಕೆ ವಿಮಾನ ಇಳಿಸಲಿಲ್ಲ ಎನ್ನುವುದು. ಇಂಧನ ತುರ್ತು ಸಂದರ್ಭದಲ್ಲಿ ಹಾಗೂ ಅಸ್ಪಷ್ಟ ಗೋಚರತೆ ಸ್ಥಿತಿಯಲ್ಲಿ ಇದು ಸಾಮಾನ್ಯವಾಗಿ ಅನುಸರಿಸುವ ವಿಧಾನ. ಲಕ್ನೋದಿಂದ ಅಲಹಾಬಾದ್‌ಗೆ ವಿಮಾನ ತಿರುಗಿಸಿರುವುದು ಸರಿಯಲ್ಲ".

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News