ಹಜ್ ಭವನ ನಿರ್ಮಾಣಕ್ಕೆ ಜಮೀನು ಮಂಜೂರು: ಸಚಿವ ಯು.ಟಿ. ಖಾದರ್

Update: 2019-07-17 12:22 GMT

ಮಂಗಳೂರು, ಜು.17: ಮಂಗಳೂರಿನಲ್ಲಿ ಹಜ್ ಕ್ಯಾಂಪ್ ಆರಂಭಗೊಂಡು 10 ವರ್ಷವಾದರೂ ಕೂಡ ಹಜ್ ಭವನ ನಿರ್ಮಾಣವಾಗದಿರುವ ನೋವು ಎಲ್ಲರಲ್ಲೂ ಇದೆ. ಈವರೆಗೆ ಸೂಕ್ತ ಜಮೀನಿನ ಸಮಸ್ಯೆಯಿತ್ತು. ಈ ಬಾರಿ ಆ ಸಮಸ್ಯೆ ಇಲ್ಲ. ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಬಳಿ ಜಮೀನು ಮಂಜೂರಾಗಿದೆ. ಅದರಂತೆ ಹಜ್ ಭವನ ನಿರ್ಮಾಣ ಕಾಮಗಾರಿಗೆ ಈ ಬಾರಿ ಚಾಲನೆ ನೀಡುವ ಸಂಕಲ್ಪ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗುತ್ತಿಲ್ಲ. ಆದಾಗ್ಯು ಮುಂದಿನ ದಿನಗಳಲ್ಲಿ ಹಜ್ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಕರ್ನಾಟಕ ರಾಜ್ಯ ಹಜ್ ಸಮಿತಿಯ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಹೊರಡುವ ಹಜ್ಜಾಜ್‌ಗಳ ವಿಮಾನ ಯಾತ್ರೆಗೆ ಚಾಲನೆ ನೀಡುವ ಸಲುವಾಗಿ ಬುಧವಾರ ಬಜ್ಪೆಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ಜರುಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಜ್ ಯಾತ್ರೆಯ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ. ಕೋಟ್ಯಾಧಿಪತಿಯು ಹಜ್ ಯಾತ್ರೆಯ ಅವಕಾಶದಿಂದ ವಂಚಿತರಾದದ್ದಿದೆ. ನಿರ್ಗತಿಕರು ಹಜ್ ಯಾತ್ರೆ ಪೂರೈಸಿದ್ದಿದೆ. ಅದೆಲ್ಲಾ ಅಲ್ಲಾಹನ ಅನುಗ್ರಹವಾಗಿದೆ. ಹಾಗಾಗಿ ಪವಿತ್ರ ಹಜ್ ಯಾತ್ರೆಯಲ್ಲಿ ದೇಶದ ಎಲ್ಲಾ ಜನರ ಒಳಿತಿಗಾಗಿ, ಶಾಂತಿ-ಸೌಹಾರ್ದಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಯು.ಟಿ.ಖಾದರ್ ಕರೆ ನೀಡಿದರು.

ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪಾಸ್‌ಪೋರ್ಟ್ ಹಸ್ತಾಂತರಿಸಿ ಆಶೀರ್ವಚನ ನೀಡಿದರು. ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಜ್ಯ ಹಜ್ ಕಮಿಟಿಯ ಸದಸ್ಯ ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಈ ಬಾರಿ 14 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಈ ಬಾರಿ 8739 ಮಂದಿಗೆ ಅವಕಾಶ ಸಿಕ್ಕಿದೆ. ಅದರಲ್ಲಿ ಮಂಗಳೂರು ಹಜ್ ಕ್ಯಾಂಪ್ ಮೂಲಕ 3 ದಿನದಲ್ಲಿ 5 ವಿಮಾನಗಳಲ್ಲಿ 747 ಮಂದಿ ಹೊರಡಲಿದ್ದಾರೆ ಎಂದರು.

ಕೇಂದ್ರ ಹಜ್ ಸಮಿತಿಯ ಸದಸ್ಯ ಹಾಗೂ ಸಂಸದ ಮುಹಮ್ಮದ್ ಇರ್ಫಾನ್ ಅಹ್ಮದ್ ಮಾತನಾಡಿ ವಿಶ್ವದಲ್ಲೇ ಹಜ್ ಯಾತ್ರೆ ಕೈಗೊಳ್ಳುವವರಲ್ಲಿ ಇಂಡೋನೇಷ್ಯಾ ಪ್ರಥಮ ಸ್ಥಾನದಲ್ಲಿದೆ. ಪಾಕಿಸ್ತಾನ ದ್ವಿತೀಯ ಸ್ಥಾನದಲ್ಲಿತ್ತು. ಇದೀಗ ಭಾರತ ದ್ವಿತೀಯ ಸ್ಥಾನದಲ್ಲಿದೆ. ಮುಂದಿನ ವರ್ಷ ಮೊದಲ ಸ್ಥಾನಕ್ಕೇರಲು ಪ್ರಯತ್ನಿಸಲಾಗುವುದು. ಹಜ್ ಯಾತ್ರಿಕರಿಗೆ ಸೌದಿ ಅರೇಬಿಯಾದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಕಳೆದ ಬಾರಿ ಸೌದಿ ಅರೇಬಿಯಾದ ರಾಜ ಭಾರತಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಹಜ್ ಯಾತ್ರಿಕರ ಕೋಟ ಹೆಚ್ಚಿಸಲು ಮನವಿ ಮಾಡಿದ್ದರು. ಅದರಂತೆ ಹಜ್ ಯಾತ್ರಿಕರ ಸಂಖ್ಯೆಯಲ್ಲಿ 25 ಸಾವಿರ ಹೆಚ್ಚಾಗಿವೆ. ಮುಂದಿನ ವರ್ಷ ಇನ್ನಷ್ಟು ಮಂದಿಗೆ ಈ ಭಾಗ್ಯ ಲಭಿಸಲಿದೆ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಕೆ.ಎಸ್. ಮುಹಮ್ಮದ್ ಮಸೂದ್, ಬಿ.ಎ.ಮೊಯ್ದಿನ್ ಬಾವ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಮಾಜಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಅಬ್ದುರ್ರಶೀದ್ ಝೈನಿ, ಬಜ್ಪೆಅನ್ಸಾರ್ ಸ್ಕೂಲ್ನ ಅಧ್ಯಕ್ಷ ಬಿ.ಎಂ. ಝಕರಿಯಾ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಹೈದರ್ ಪರ್ತಿಪ್ಪಾಡಿ, ಕೆ.ಕೆ. ಶಾಹುಲ್ ಹಮೀದ್, ಎನ್.ಎಸ್. ಕರೀಂ, ಮಾಜಿ ಮೇಯರ್ ಕೆ. ಅಶ್ರಫ್, ಮಾಜಿ ಉಪಮೇಯರ್‌ಗಳಾದ ಬಶೀರ್ ಬೈಕಂಪಾಡಿ, ಮುಹಮ್ಮದ್ ಕುಂಜತ್ತಬೈಲ್, ಬಜ್ಪೆಗ್ರಾಪಂ ಸದಸ್ಯ ಸಿರಾಜ್, ಶರೀಫ್ ಮರವೂರು, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಜಿಲ್ಲಾ ವಕ್ಫ್  ಅಧಿಕಾರಿ ಹಾಜಿ ಅಬೂಬಕರ್ ಮೋಂಟುಗೋಳಿ, ಹಜ್ ನಿರ್ವಹಣಾ ಸಮಿತಿಯ ಪದಾಧಿಕಾರಿಗಳಾದ ಸಿ.ಮಹಮೂದ್ ಹಾಜಿ, ಹನೀಫ್ ಹಾಜಿ ಬಂದರ್, ಹನೀಫ್ ಹಾಜಿ ಗೋಳ್ತಮಜಲು, ರಫೀಕ್ ಹಾಜಿ ಕೊಡಾಜೆ, ಅಹ್ಮದ್ ಬಾವಾ ಪಡೀಲ್, ಸುಹೈಲ್ ಕಂದಕ್, ನಾಸಿರ್ ಲಕ್ಕಿಸ್ಟಾರ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಹಜ್ ಕಮಿಟಿಯ ಇಒ ಸರ್ಫ್ರಾಝ್ ಖಾನ್ ಸರ್ದಾರ್ ಸ್ವಾಗತಿಸಿದರು. ಹಜ್ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿಎಂ ಮುಮ್ತಾಝ್ ಅಲಿ ಕೃಷ್ಣಾಪುರ ವಂದಿಸಿದರು.ಸಮಿತಿಯ ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News