9 ವರ್ಷ ಕಳೆದರೂ 29 ಕೊರಗ ಕುಟುಂಬಗಳಿಗೆ ದೊರೆಯದ ನಿವೇಶನ: ಐಟಿಡಿಪಿ ಅಧಿಕಾರಿ ವಿರುದ್ಧ ಲೋಕಾಯುಕ್ತ ತನಿಖೆಗೆ ಚಾಲನೆ

Update: 2019-07-17 15:21 GMT

ಉಡುಪಿ, ಜು.17: ಸರಕಾರ ನೀಡಿದ ಹಕ್ಕುಪತ್ರ ಹಿಡಿದುಕೊಂಡು ಕಳೆದ ಎಂಟು ವರ್ಷಗಳಿಂದ 29 ಕೊರಗ ಕುಟುಂಬಗಳು ನಿವೇಶನಕ್ಕಾಗಿ ಅಲೆದಾಡು ತ್ತಿದ್ದು, ಕಾಯ್ದಿರಿಸಲಾಗಿದ್ದ ಜಾಗವನ್ನು ಈವರೆಗೂ ನಿವೇಶನಗಳನ್ನಾಗಿ ವಿಂಗಡಿಸಿ ವಿತರಿಸದ ಕುರಿತು ನೀಡಿದ ದೂರಿನಂತೆ ರಾಜ್ಯ ಲೋಕಾಯುಕ್ತರು ಉಡುಪಿ ಜಿಲ್ಲಾ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಾಧಿಕಾರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.

2010ರಲ್ಲೇ ಕೊರಗ ಸಮುದಾಯದವರಿಗಾಗಿ ಉಡುಪಿ ಜಿಲ್ಲಾಡಳಿತದಿಂದ ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿಯ 229ನೇ ಸರ್ವೇ ನಂಬ್ರದ 2.61 ಎಕರೆ ಜಮೀನನ್ನು ಕಾಯ್ದಿರಿಸಲಾಗಿತ್ತು. ಆದರೆ ಈವರೆಗೆ ಈ ಜಾಗವನ್ನು ನಿವೇಶನಗಳನ್ನಾಗಿ ವಿಂಗಡಿಸದೆ ಕರ್ತವ್ಯ ಲೋಪ ಎಸಗಿದ್ದ ಗಿರಿಜನ ಯೋಜನಾ ಸಮನ್ವಯ ಅಧಿಕಾರಿ ವಿಶ್ವನಾಥ್ ವಿರುದ್ಧ ನಿವೇಶನ ವಂಚಿತರೇ ಸ್ಥಾಪಿಸಿದ ಕೊಂಡಾಡಿ ಗಿರಿಜನ ಕಾಲೋನಿ ನಿವೇಶನ ದಾರರ ಸಂಘದ ಮೂಲಕ ಲೋಕಾ ಯುಕ್ತಕ್ಕೆ ಮಾ.18ರಂದು ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಎರಡು ಮೂರು ದಿನಗಳ ಹಿಂದೆ ವಿಶ್ವನಾಥ್ ಅವರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ಈ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಮುಂದೆ ಇಲ್ಲೂ ನ್ಯಾಯ ಸಿಗದಿದ್ದರೆ ಇದೇ ಸಂಘದ ಮೂಲಕ ಈ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸ ಲಾಗುವುದು ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಕುಂಜಿಬೆಟ್ಟು ಕಾನೂನು ವಿದ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

ಅವೈಜ್ಞಾನಿಕ ಕಾಮಗಾರಿ: ಕೊರಗರ ಸರ್ವತೋಮುಖ ಅಭಿವೃದ್ದಿಗಾಗಿ ಹಾಗೂ ಅವರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರ ಉಡುಪಿ ಜಿಲ್ಲೆಗೆ 10ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಅದರಲ್ಲಿ ಕೊಂಡಾಡಿ ಕಾಲೋನಿಗೆ ಮೂಲಭೂತ ಸೌರ್ಕಯಕ್ಕಾಗಿ 50 ಲಕ್ಷ ರೂ. ವಿಶೇಷ ಅನುದಾನ ಮಂಜೂರು ಮಾಡಲಾಗಿತ್ತು.

ಆದರೆ ಈ ಕಾಲನಿಗೆ ರಸ್ತೆ, ನಳ್ಳಿನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಡುಗಡೆ ಮಾಡಲಾಗಿದ್ದ ಈ 50 ಲಕ್ಷ ರೂ. ಹೇಗೆ ವ್ಯಯಿಸಲಾಗಿದೆ ಎಂಬ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಈ ಕಾಲೋನಿಯಲ್ಲಿ ಈ ಯಾವ ಸೌಕರ್ಯಗಳನ್ನು ಕೂಡ ಈವರೆಗೆ ಒದಗಿಸಿಲ್ಲ. ಬದಲಾಗಿ ಹಣವನ್ನು ಇಲ್ಲಿ ಸಮತಟ್ಟುಗೊಳಿಸಲು ನಡೆಸಿರುವ ಅವೈಜ್ಞಾನಿಕ ಕಾಮಗಾರಿಗೆ ವ್ಯಯಿಸಾಗಿದೆ ಎಂದು ಅವರು ಆರೋಪಿಸಿದರು.

ಹೀಗೆ ಈ ಜಾಗದಲ್ಲಿ ಸುಮಾರು 30 ಅಡಿ ಆಳಕ್ಕೆ ಗುಡ್ಡವನ್ನು ಕೊರೆಯ ಲಾಗಿದೆ. ಇದಕ್ಕೆ ಕಾಂಕ್ರೀಟ್ ಗೋಡೆ ಕೂಡ ನಿರ್ಮಿಸಿಲ್ಲ. ಇದರ ಪರಿಣಾಮ ಈ ಬಾರಿಯ ಮೊದಲ ಮಳೆಗೆ ಈ ಗುಡ್ಡವೂ ಕುಸಿದು ಬಿದ್ದಿದೆ. ಈ ಅಪಾಯ ಕಾರಿ ನಿವೇಶನಗಳನ್ನು ಪಡೆದುಕೊಂಡರೂ ಮನೆ ಕಟ್ಟಲು ಆಗದ ಪರಿಸ್ಥಿತಿ ಉಂಟಾಗಿದೆ ಎಂದು ಶಾನುಭಾಗ್ ದೂರಿದರು.

ಅಪಾಯಕಾರಿ ನಿವೇಶನ: ಒಂದು ಕಡೆ ಗುಡ್ಡ ಕೊರೆದಿದ್ದು, ಇನ್ನೊಂದು ಕಡೆ ಹೊಂಡಕ್ಕೆ ಕಲ್ಲುಗಳನ್ನು ತುಂಬಿಸಿ, ಅದರ ಮೇಲೆ ಮಣ್ಣು ಹಾಕಿ ಸಮ ತಟ್ಟುಗೊಳಿಸಲಾಗಿದೆ. ಈ ಅಪಾಯಕಾರಿ ಸ್ಥಳದಲ್ಲಿ ಮನೆ ನಿರ್ಮಿಸಲು ನಿವೇಶನ ದಾರರು ಭಯ ಪಡುತ್ತಿದ್ದಾರೆ.

ಮೇಲ್ಭಾಗದ ನಿವೇಶನದಲ್ಲಿ ತುಂಬಿಸಿರುವ ಮಣ್ಣು ಒಂದೆ ಮಳೆಗೆ 30 ಅಡಿ ಆಳಕ್ಕೆ ಹೊಂಡ ಕೊರೆದು ಮಾಡಲಾದ ನಿವೇಶನದ ಮೇಲೆ ಕುಸಿದು ಬಿದ್ದಿದೆ. ಇಂತಹ ಜಾಗದಲ್ಲಿ ಮನೆಯನ್ನು ಹೇಗೆ ನಿರ್ಮಿಸಿ ಬದುಕು ನಡೆಸುವುದು. ಈ ಜಾಗವನ್ನು ಸಮತಟ್ಟುಗೊಳಿಸಿ ಅಥವಾ ಗುಡ್ಡ ಕುಸಿಯದಂತೆ ಕಾಂಕ್ರೀಟ್ ಗೋಡೆ ನಿರ್ಮಿಸಿಕೊಡುವವರೆಗೆ ನಿವೇಶನವನ್ನು ಪಡೆಯುವುದಿಲ್ಲ ಎಂಬುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ನಿವೇಶನದಾರರಾದ ಸುಬೇದ ಅಂಬಾ ಗಿಲು ಹೇಳಿದರು.

ಈ ಅವೈಜ್ಞಾನಿಕ ಕಾಮಗಾರಿಯಿಂದ ನಿವೇಶನದಾರರು ಇಲ್ಲಿ ಮನೆ ನಿರ್ಮಿ ಸುವ ಕನಸು ಮತ್ತಷ್ಟು ವಿಳಂಬವಾಗುತ್ತಿದೆ. ಈ ಜಾಗದಲ್ಲಿ ಮಾಡಿರುವ ಅನುಪಯುಕ್ತ ಕಾಮಗಾರಿ ವಿವರಗಳನ್ನು ಕೂಡ ಲೋಕಾಯುಕ್ತರ ಗಮನಕ್ಕೆ ತರಲಾಗಿದ್ದು, ಈ ನಿವೇಶನದ ಬದಲು ಬೇರೆ ಜಾಗ ನೀಡುವಂತೆ ಸರಕಾರವನ್ನು ಆಗ್ರಹಿಸಲು ಚಿಂತನೆ ನಡೆಸಲಾಗಿದೆ ಎಂದು ಶಾನುಬಾಗ್ ತಿಳಿಸಿದರು.

ಎಚ್ಚೆತ್ತ ಅಧಿಕಾರಿಗಳು: ನಾಳೆ ಗಡಿ ಗುರುತು

2011ರ ಆ.15ರಂದು ಈ 29 ಕುಟುಂಬಗಳಿಗೆ ನಿವೇಶನಗಳ ಹಕ್ಕು ಪತ್ರ ಗಳನ್ನು ವಿತರಿಸಲಾಗಿತ್ತು. ಆದರೆ ಆ ಜಾಗವನ್ನು ಸಮತಟ್ಟುಗೊಳಿಸಿ ಗಡಿ ಗುರುತುಗೊಳಿಸುವ ಕಾರ್ಯ ಮಾತ್ರ ಈವರೆಗೆ ನಡೆದಿಲ್ಲ. ಇದರ ವಿರುದ್ಧ ಮನವಿ, ಹೋರಾಟಗಳನ್ನು ನಡೆಸಿದರೂ ಪ್ರಯೋಜನ ಆಗದಿದ್ದಾಗ ನಿವೇಶನ ದಾರರು 2017ರಲ್ಲಿ ಪ್ರತಿಷ್ಠಾನದ ಮೊರೆ ಹೋದರು.

ಈ ಬಗ್ಗೆ ಪ್ರತಿಷ್ಠಾನ ಸಾಕಷ್ಟು ಹೋರಾಟ ನಡೆಸಿತು. ಇದೀಗ 18 ತಿಂಗಳಾ ದರೂ ನಿವೇಶನಗಳ ಗಡಿ ಗುರುತು ಮಾಡುವ ಕೆಲಸ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಾನ ಜು.17ರಂದು ಪತ್ರಿಕಾಗೋಷ್ಠಿ ಕರೆಯುವ ಕುರಿತ ಮಾಹಿತಿ ತಿಳಿದ ಅಧಿಕಾರಿಗಳು ನಿವೇಶನದಾರರನ್ನು ಜು.16ರಂದು ಸಂಪರ್ಕಿಸಿ ಇಂದು ಸ್ಥಳಕ್ಕೆ ಬರುವಂತೆ ತಿಳಿಸಿದ್ದರು. ಅದರಂತೆ ನಿವೇಶನದಾರರು ಸ್ಥಳಕ್ಕೆ ತೆರಳಿದ್ದು, ಜು.18 ರಂದು ಗಡಿ ಗುರುತು ಮಾಡಿ ನಿವೇಶನ ಹಂಚಿಕೆ ಮಾಡುವುದಾಗಿ ಅಧಿಕಾರಿ ವಿಶ್ವನಾಥ್ ಭರವಸೆ ನೀಡಿದ್ದಾರೆ ಎಂದು ಸುಬೇದ ಅಂಬಾಗಿಲು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News