ಗನ್ ಹಿಡಿದು ನೃತ್ಯ ಮಾಡಿದ್ದ ಬಿಜೆಪಿ ಶಾಸಕ ಪಕ್ಷದಿಂದ ಉಚ್ಛಾಟನೆ

Update: 2019-07-17 16:03 GMT

ಹೊಸದಿಲ್ಲಿ, ಜು.17: ಔತಣಕೂಟದಲ್ಲಿ ಎರಡೂ ಕೈಗಳಲ್ಲಿ ಗನ್ ಹಿಡಿದು ನೃತ್ಯ ಮಾಡಿದ್ದ ಉತ್ತರಾಖಂಡದ ಬಿಜೆಪಿ ಶಾಸಕ ಕನ್ವರ್ ಪ್ರಣವ್ ಸಿಂಗ್‌ನನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉತ್ತರಾಖಂಡದ ಖಾನ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಂಗ್‌ನ ಅಶಿಸ್ತಿನ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ತನ್ನ ಮನೆಯಲ್ಲಿ ಬೆಂಬಲಿಗರೊಂದಿಗೆ ಔತಣ ಕೂಟ ನಡೆಸಿದ್ದ ಪ್ರಣವ್‌ಸಿಂಗ್, ಒಂದು ಕೈಯಲ್ಲಿ ಮದ್ಯದ ಗ್ಲಾಸ್ ಮತ್ತು ಇನ್ನೊಂದು ಕೈಯಲ್ಲಿ ಎರಡು ಪಿಸ್ತೂಲ್ ಹಿಡಿದು ನೃತ್ಯ ಮಾಡಿದ್ದ. ಸ್ವಲ್ಪ ಹೊತ್ತಿನ ಬಳಿಕ ಮದ್ಯದ ಗ್ಲಾಸನ್ನು ತನ್ನ ಸಹಾಯಕನಿಗೆ ನೀಡಿ ಎರಡೂ ಕೈಗಳಲ್ಲಿ ಗನ್‌ಗಳನ್ನು ಹಿಡಿದು ಝಳಪಿಸುತ್ತಿದ್ದ ಘಟನೆಯ ವೀಡಿಯೊ ದೃಶ್ಯ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಂಗ್, ತಾನು ಲೈಸೆನ್ಸ್ ಇರುವ ಗನ್ ಹೊಂದಿದ್ದೆ ಮತ್ತು ಅದನ್ನು ಲೋಡ್ ಮಾಡಿರಲಿಲ್ಲ. ಯಾರನ್ನೂ ಬೆದರಿಸಿಲ್ಲ, ಆದ್ದರಿಂದ ಅದು ಅಪರಾಧವಲ್ಲ. ಮದ್ಯ ಸೇವಿಸುವುದು ಹಾಗೂ ಲೈಸೆನ್ಸ್ ಇರುವ ಗನ್ ಹೊಂದುವುದು ಅಪರಾಧವೇ ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News