ಉಯಿಘರ್ ತಾಯಿ, ಮಗುವಿಗೆ ಆಸ್ಟ್ರೇಲಿಯಕ್ಕೆ ಬರಲು ಬಿಡಿ: ಚೀನಾಕ್ಕೆ ಆಸ್ಟ್ರೇಲಿಯ ಕರೆ

Update: 2019-07-17 16:18 GMT

ಸಿಡ್ನಿ, ಜು. 17: ಆಸ್ಟ್ರೇಲಿಯದ ಮಗು ಮತ್ತು ಅದರ ಉಯಿಘರ್ ತಾಯಿಗೆ ಚೀನಾದಿಂದ ಹೊರಹೋಗಲು ಅನುಮತಿ ನೀಡುವಂತೆ ಆಸ್ಟ್ರೇಲಿಯ ಸರಕಾರ ಬುಧವಾರ ಚೀನಾಕ್ಕೆ ಕರೆ ನೀಡಿದೆ.

 ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ವಾಸಿಸುತ್ತಿರುವ ಉಯಿಘರ್ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಚೀನಾ ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸುವ ಪತ್ರವೊಂದಕ್ಕೆ ಸಹಿ ಹಾಕಿದ ದಿನಗಳ ಬಳಿಕ, ಚೀನಾದ ಮೇಲಿನ ಒತ್ತಡವನ್ನು ಆಸ್ಟ್ರೇಲಿಯ ಈ ಮೂಲಕ ಹೆಚ್ಚಿಸಿದೆ.

ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರು ಮತ್ತು ಹೆಚ್ಚಾಗಿ ಟರ್ಕಿ ಭಾಷೆ ಮಾತನಾಡುವ ಇತರ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಚೀನಾವು ‘ಮರು-ಶಿಕ್ಷಣ ಶಿಬಿರ’ಗಳಲ್ಲಿ ಕೂಡಿಹಾಕಿರುವುದನ್ನು ಸ್ಮರಿಸಬಹುದಾಗಿದೆ.

ಮಗು ಆಸ್ಟ್ರೇಲಿಯದ ತಂದೆ ಮತ್ತು ಉಯಿಘರ್ ತಾಯಿಗೆ 2017 ಆಗಸ್ಟ್‌ನಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ಹುಟ್ಟಿದೆ. ಮಗುವಿಗೆ ಪೌರತ್ವ ನೀಡಲು ಆಸ್ಟ್ರೇಲಿಯವು ಮೊದಲು ನಿರಾಕರಿಸಿತ್ತು. ಆದರೆ, ಕಾನೂನು ಸಮರದ ಬಳಿಕ ಕಳೆದ ವರ್ಷ ಪೌರತ್ವ ನೀಡಿತ್ತು.

ತನ್ನ ಉಯಿಘರ್ ಪತ್ನಿ ನಾದಿಲಾ ವುಮಯರ್ ಮತ್ತು ಮಗು ಆಸ್ಟ್ರೇಲಿಯಕ್ಕೆ ಬರಲು ಸಾಧ್ಯವಾಗುವಂತೆ ಸದ್ದಾಮ್ ಅಬ್ದುಸ್ಸಲಾಮ್ ತಿಂಗಳುಗಳ ಕಾಲ ಹೋರಾಟ ನಡೆಸಿದ್ದಾರೆ. ಅವರು ತನ್ನ ಮಗುವನ್ನು ಈತನಕ ನೋಡಿಲ್ಲ.

ವುಮಯರ್ ಮತ್ತು ಆಸ್ಟ್ರೇಲಿಯ ಪ್ರಜೆಯಾಗಿರುವ ಅವರ ಮಗ ಆಸ್ಟ್ರೇಲಿಯಕ್ಕೆ ಪ್ರಯಾಣಿಸಲು ಅವಕಾಶ ನೀಡಬೇಕೆಂದು ಬೀಜಿಂಗ್‌ನಲ್ಲಿರುವ ಆಸ್ಟ್ರೇಲಿಯ ರಾಯಭಾರ ಕಚೇರಿಯು ಚೀನಾದ ಅಧಿಕಾರಿಗಳಿಗೆ ಔಪಚಾರಿಕ ಮನವಿ ಮಾಡಿದೆ ಎಂದು ಆಸ್ಟ್ರೇಲಿಯ ವಿದೇಶ ಸಚಿವೆ ಮ್ಯಾರಿಸ್ ಪೇನ್ ಬುಧವಾರ ತಿಳಿಸಿದರು.

ಅಬ್ದುಸ್ಸಲಾಮ್ ತನ್ನ ವ್ಯಥೆಯನ್ನು ರಾಷ್ಟ್ರೀಯ ಸುದ್ದಿವಾಹಿನಿ ಎಬಿಸಿಯಲ್ಲಿ ಸೋಮವಾರ ಹಂಚಿಕೊಂಡ ಬಳಿಕ ವಿದೇಶ ಸಚಿವೆ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News