ಟ್ರಂಪ್‌ರ ‘ಜನಾಂಗೀಯವಾದಿ’ ಹೇಳಿಕೆಗಳನ್ನು ಖಂಡಿಸಿದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್

Update: 2019-07-17 16:31 GMT

ವಾಶಿಂಗ್ಟನ್, ಜು. 17: ಡೆಮಾಕ್ರಟಿಕ್ ಪಕ್ಷದ ನಾಲ್ವರು ಅಲ್ಪಸಂಖ್ಯಾತ ಸಂಸದೆಯರ ಮೇಲೆ ನಡೆಸಿದ ‘ಜನಾಂಗೀಯವಾದಿ’ ವಾಗ್ದಾಳಿಗಾಗಿ ಹಾಗೂ ವಲಸಿಗರ ಬಗ್ಗೆ ಬಳಸಿದ ನಿಂದನಾತ್ಮಕ ಭಾಷೆಗಾಗಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಔಪಚಾರಿಕವಾಗಿ ಖಂಡಿಸಿದೆ.

ಈ ಸಂದರ್ಭದಲ್ಲಿ ರಿಪಬ್ಲಿಕನ್ ಸಂಸದರು ಟ್ರಂಪ್‌ಗೆ ಬೆಂಬಲ ವ್ಯಕ್ತಪಡಿಸಿದರು. ಆದರೆ, ಅವರ ಪಕ್ಷದ ನಾಲ್ವರು ಸಂಸದರು ಖಂಡಿಸುವ ನಿರ್ಣಯದ ಪರವಾಗಿ ಮತ ಹಾಕಿದರು.

ಡೆಮಾಕ್ರಟಿಕ್ ಪಕ್ಷದ 235 ಸಂಸದರು ನಿರ್ಣಯವನ್ನು ಬೆಂಬಲಿಸಿದರು. ಓರ್ವ ಸ್ವತಂತ್ರ ಸಂಸದನೂ ನಿರ್ಣಯದ ಪರವಾಗಿ ಮತ ಹಾಕಿದರು.

ಮ್ಯಾಸಚೂಸಿಟ್ಸ್‌ನ ಅಯಾನಾ ಪ್ರೆಸ್ಲಿ, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ, ಮಿನಸೋಟ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಮತ್ತು ಮಿಶಿಗನ್‌ನ ರಶೀದಾ ತ್ಲೈಬ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿರುವುದನ್ನು ಸ್ಮರಿಸಬಹುದಾಗಿದೆ. ಈ ನಾಲ್ವರೂ ಮಹಿಳೆಯರು ಬಿಳಿಯೇತರರು.

‘‘ನೀವು ಇಲ್ಲಿ ಸಂತೋಷವಾಗಿಲ್ಲದಿದ್ದರೆ ಹೋಗಬಹುದು. ನಾನು ಹೇಳುವುದಿಷ್ಟೆ. ಅವರು ಇಲ್ಲಿಂದ ಹೋಗಲು ಬಯಸಿದ್ದರೆ, ಹೋಗಬಹುದು’’ ಎಂದು ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಈ ಎಲ್ಲ ನಾಲ್ವರು ಮಹಿಳೆಯರು ಅಲ್-ಖಾಯಿದದಂಥ ಅಮೆರಿಕದ ಶತ್ರುಗಳನ್ನು ಪ್ರೀತಿಸುತ್ತಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

435 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರಟಿಕ್ ಸಂಸದರು ಬಹುಮತ ಹೊಂದಿದ್ದಾರೆ.

ಜನಾಂಗೀಯವಾದಿಯಲ್ಲ: ಟ್ರಂಪ್:

 ಡೆಮಾಕ್ರಟಿಕ್ ಪಕ್ಷದ ನಾಲ್ವರು ಅಲ್ಪಸಂಖ್ಯಾತ ಸಂಸದೆಯರ ವಿರುದ್ಧ ನಾನು ಮಾಡಿರುವ ವಾಗ್ದಾಳಿ ‘ಜನಾಂಗೀಯವಾದಿ’ ಎಂಬ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ನಿರಾಕರಿಸಿದ್ದಾರೆ.

 ‘‘ನಾನು ಮಾಡಿರುವ ಟ್ವೀಟ್‌ಗಳು ಜನಾಂಗೀಯವಾದಿಯಲ್ಲ. ನನ್ನ ದೇಹದಲ್ಲಿ ಜನಾಂಗೀಯವಾದಿ ಎಲುಬಿಲ್ಲ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News