ಜಾಮೀನು ಶರತ್ತಾಗಿ ಕುರ್‌ಆನ್ ಹಂಚಿಕೆ: ಆದೇಶ ಹಿಂದೆಗೆದುಕೊಂಡ ರಾಂಚಿ ನ್ಯಾಯಾಲಯ

Update: 2019-07-17 18:21 GMT

ರಾಂಚಿ, ಜು. 17: ಫೇಸ್‌ಬುಕ್‌ನಲ್ಲಿ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡುವ ಹೇಳಿಕೆ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಜಾಮೀನು ನೀಡಲು ಐದು ಕುರ್‌ಆನ್ ಪ್ರತಿಗಳನ್ನು ಹಂಚಲು ಆರೋಪಿ ಮಹಿಳೆಗೆ ವಿಧಿಸಿದ ಶರತ್ತನ್ನು ರಾಂಚಿಯ ಸ್ಥಳೀಯ ನ್ಯಾಯಾಲಯ ಹಿಂದೆಗೆದುಕೊಂಡಿದೆ.

 ಈ ಆದೇಶ ಅನುಷ್ಠಾನಗೊಳಿಸಲು ಕಷ್ಟಕರ ಎಂದು ಉಲ್ಲೇಖಿಸಿ ಪೊಲೀಸರು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಶರತ್ತನ್ನು ಕೈಬಿಟ್ಟಿದೆ. ಆದೇಶ ಬದಲಾಯಿಸಿರುವ ನ್ಯಾಯಾಲಯ, 7 ಸಾವಿರ ರೂಪಾಯಿ ಜಾಮೀನು ಬಾಂಡ್ ಶರತ್ತಿನ ಮೇಲೆ ಭಾರತಿಗೆ ಜಾಮೀನು ನೀಡಿದೆ. ಜಾಮೀನು ಶರತ್ತಾಗಿ ಪಿಥೋರಿಯಾದಲ್ಲಿರುವ ಅಂಜುಮಾನ್ ಇಸ್ಲಾಮಿಯಾಕ್ಕೆ ಹಾಗೂ ಇತರ ಶಾಲೆ, ಕಾಲೇಜುಗಳ ಗ್ರಂಥಾಲಯಕ್ಕೆ ತಲಾ ನಾಲ್ಕು ಕುರ್‌ಆನ್ ಪ್ರತಿಗಳನ್ನು ವಿತರಿಸುವಂತೆ ನ್ಯಾಯಾಂಗ ದಂಡಾಧಿಕಾರಿ ಮನೀಶ್ ಸಿಂಗ್ ಮಂಗಳವಾರ ಆರೋಪಿ ರಿಚಾ ಭಾರತಿಗೆ ನಿರ್ದೇಶಿಸಿದ್ದರು.

ನ್ಯಾಯಾಲಯದ ಈ ನಿರ್ದೇಶನದ ವಿರುದ್ಧ ಕೆಲವರಿಂದ ತೀಕ್ಷ್ಣ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತನ್ನ ಆದೇಶವನ್ನು ಹಿಂದೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News