ರಾಜ್ಯಸಭೆ ಬಹುಮತಕ್ಕೆ ಆಪರೇಷನ್ ಕಮಲ!

Update: 2019-07-18 03:58 GMT

ಹೊಸದಿಲ್ಲಿ, ಜು.18: ರಾಜ್ಯಸಭೆಯಲ್ಲಿ ಎಸ್ಪಿ ಸಂಸದ ನೀರಜ್ ಶೇಖರ್ ಅವರ ರಾಜೀನಾಮೆ ಬಳಿಕ ಇದೀಗ ಸಮಾಜವಾದಿ ಪಕ್ಷ ಮತ್ತಿಬ್ಬರು ಸಂಸದರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಪಕ್ಷದ ಇಬ್ಬರು ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ.

ಇದರೊಂದಿಗೆ ಬಿಜೆಪಿ ಮೇಲ್ಮನೆಯಲ್ಲಿ ಬಹುಮತಕ್ಕೆ ಮತ್ತಷ್ಟು ನಿಕಟವಾಗಲಿದೆ. ಸದ್ಯ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದರಿಂದ ಮಸೂದೆಗಳ ಅಂಗೀಕಾರಕ್ಕೆ ತೊಡಕಾಗುತ್ತಿದೆ.

ಮುಂದಿನ ವರ್ಷ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ನೀರಜ್ ಶೇಖರ್ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮರುದಿನವೇ ಬಿಜೆಪಿ ಸೇರಿದ್ದಾರೆ. ನೀರಜ್ ಶೇಖರ್ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ. 2014ರಿಂದ ಸದಸ್ಯರಾಗಿರುವ ಅವರು 2020ರ ನವೆಂಬರ್ 25ರಂದು ನಿವೃತ್ತರಾಗುತ್ತಾರೆ. ಈ ಸ್ಥಾನಕ್ಕೆ ಮರು ಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶದಲ್ಲಿ ದೊಡ್ಡ ಬಹುಮತ ಇರುವ ಕಾರಣ ಸುಲಭವಾಗಿ ಬಿಜೆಪಿ ಈ ಸ್ಥಾನವನ್ನು ಗೆಲ್ಲಬಹುದಾಗಿದೆ. ಮತ್ತೆ ಇಬ್ಬರು ರಾಜೀನಾಮೆ ನೀಡಿದಲ್ಲಿ ಬಹುಮತದ ಅಗತ್ಯತೆ 120ಕ್ಕೆ ಕುಸಿಯಲಿದ್ದು, ಇದು ಬಿಜೆಪಿಗೆ ಲಾಭವಾಗಲಿದೆ. ತೆಲುಗುದೇಶಂ ಪಕ್ಷದ ಆರು ಸಂಸದರ ಪೈಕಿ ನಾಲ್ವರು ಇತ್ತೀಚೆಗೆ ಬಿಜೆಪಿ ಸೇರಿದ್ದರು. ಎನ್‌ಡಿಎ ಸದ್ಯ 116 ಸದಸ್ಯರನ್ನು ಹೊಂದಿದೆ.

ಮೂವರು ಎಸ್ಪಿ ಸಂಸದರ ರಾಜೀನಾಮೆ ಬಳಿಕ ಅಖಿಲೇಶ್ ಯಾದವ್ ಅವರ ಪಕ್ಷದಲ್ಲಿ ಏಳು ಮಂದಿ ರಾಜ್ಯಸಭಾ ಸದಸ್ಯರಷ್ಟೇ ಉಳಿಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News