ಜೀವಾವಧಿ ಶಿಕ್ಷೆಗೊಳಗಾಗಿದ್ದ ‘ಸರವಣ ಭವನ್’ ಮಾಲಕ ರಾಜಗೋಪಾಲ್ ನಿಧನ

Update: 2019-07-18 15:39 GMT

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸರವಣ ಭವನದ ಮಾಲಕ ರಾಜಗೋಪಾಲ್ ನಿಧನ

ಹೊಸದಿಲ್ಲಿ, ಜು. 18: ತನ್ನ ಹೊಟೇಲ್‌ನ ಉದ್ಯೋಗಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಹಾಗೂ ಅಸೌಖ್ಯದ ಕಾರಣಕ್ಕೆ ಚೆನ್ನೈಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಗೊಂಡ ಸರವಣ ರೆಸ್ಟೋರೆಂಟ್ ಸಮೂಹದ ಮಾಲಕ ಪಿ. ರಾಜಗೋಪಾಲ್ (72) ಗುರುವಾರ ನಿಧನರಾಗಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ರಾಜಗೋಪಾಲ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮದರಾಸ್ ಉಚ್ಚ ನ್ಯಾಯಾಲಯ ಮಂಗಳವಾರ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜಗೋಪಾಲ್ ಅವರನ್ನು ಸರಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ರಾಜಗೋಪಾಲ್ ಅವರ ಪುತ್ರ ಆರ್. ಸರವಣನ್ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಎನ್. ನಿರ್ಮಲ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತ್ತು.

ಶನಿವಾರದಿಂದ ರಾಜಗೋಪಾಲ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಆದುದರಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು ಹಾಗೂ ಕೃತಕ ಉಸಿರಾಟ ನೀಡಲಾಗಿತ್ತು ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ತಿಳಿಸಿದ್ದಾರೆ. 2001ರಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಭಾರತದ ‘ದೋಸೆ ರಾಜ’ ರಾಜಗೋಪಾಲ್ ದೋಷಿ ಎಂದು ಪರಿಗಣಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News