ಮುಂಗಾರು ಮಳೆ ಕ್ಷೀಣಗೊಂಡರೂ ತಪ್ಪಿಲ್ಲ ಕೃತಕ ನೆರೆಯ ಆತಂಕ !

Update: 2019-07-18 12:48 GMT

ಮಂಗಳೂರು, ಜು.17: ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ದಕ್ಷಿಣ ಕನ್ನಡದಲ್ಲಿ ಮುಂಗಾರುವಿನ ಸಂದರ್ಭ ಧಾರಾಕಾರ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಈವರೆಗೆ ವಾಡಿಕೆ ಮಳೆಯ ಕಾಲು ಭಾಗವೂ ಜಿಲ್ಲೆಯಲ್ಲಿ ಮಳೆ ಸುರಿದಿಲ್ಲ. ಹಾಗಿದ್ದರೂ ಮಳೆ ಸುರಿಯಲು ಆರಂಭಿಸಿದರೆ ಮಂಗಳೂರು ನಗರದಲ್ಲಂತೂ ಕೃತಕ ನೆರೆಯ ಆತಂಕ ಮಾತ್ರ ತಪ್ಪುತ್ತಿಲ್ಲ.

ಕರಾವಳಿಯಲ್ಲಿ ಇನ್ನೆರಡು ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ದ.ಕ. ಜಿಲ್ಲೆಯಲ್ಲಿ ಮಳೆ ಮತೆತಿ ಚುರುಕುಗೊಂಡಿದೆ. ಕಳೆದೆರಡು ದಿನಗಳಿಂದ ತೀರಾ ಕ್ಷೀಣವಾಗಿದ್ದ ಮುಂಗಾರು ಮಳೆ ನಿನ್ನೆ ರಾತ್ರಿಯಿಂದ ಬಿರಿಸುಗೊಂಡಿತ್ತು. ಧಾರಾಕಾರ ಮಳೆಯಿಂದಾಗಿ ಬೆಳಗ್ಗಿನ ಹೊತ್ತು ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ನೀರು ರಸ್ತೆಯಲ್ಲೇ ಹರಿದು ಜನಸಾಮಾನ್ಯರು ಪರದಾಡಿದರು. ನಗರದ ಕೊಡಿಯಾಲ್‌ ಬೈಲ್, ಬಂಟ್ಸ್ ಹಾಸ್ಟೆಲ್, ಗೋರಿಗುಡ್ಡ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದ ಮಳೆ ನೀರು ಸರಾಗವಾಗಿರಿದು ಹೋಗದೆ ಸಮಸ್ಯೆಯಾಯಿತು.

ಮಂಗಳೂರಿನಲ್ಲಿರುವ ಕೇಂದ್ರ ರೈಲು ನಿಲ್ದಾಣದ ಎದುರು ಮಳೆ ನೀರು ಟಿಕೆಟ್ ಕೌಂಟರ್ ಸಮೀಪಕ್ಕೂ ವ್ಯಾಪಿಸಿ ಪ್ರಯಾಣಿಕರು ಪರದಾಡಿದರು. ಅಲ್ಲಿದ್ದ ಸಿಬ್ಬಂದಿ ನೀರು ಸರಾಗವಾಗಿ ಹರಿದು ಹೋಗಲು ಶ್ರಮಿಸಿದರು.

ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದ ಎದುರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದು, ಅಗೆದು ಹಾಕಿರುವುದರಿಂದ ಮಳೆ ನೀರು ನಿಲ್ದಾಣದ ಎದುರು, ಟಿಕೆಟ್ ಕೌಂಟರ್ ಬಳಿ ಸಂಗ್ರಹವಾಗಿತ್ತು. ನಗರದ ಎಂಪೈರ್ ಮಾಲ್ ಸಮೀಪ, ಜೈಲು ರಸ್ತೆ, ಗುಜರಾತಿ ಶಾಲೆ ಬಳಿ, ಜ್ಯೋತಿ ವೃತ್ತದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲೇ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗಿತ್ತು. ಮಳೆ ನೀರು ನಿಂತು ಸಂಕಷ್ಟ ಕ್ಕೀಡಾದವರಿಗೆ ಅಗ್ನಿಶಾಮಕ ದಳದಿಂದ ನೆರವು ನೀಡಲಾಯಿತು. ಕೆಲ ನಿಮಿಷಗಳ ಕಾಲ ಧಾರಾಕಾರವಾಗಿ ಸುರಿದು ಮತ್ತೆ ಮಂದ ಗತಿಯಲ್ಲಿ ಮಧ್ಯಾಹ್ನದವರೆಗೂ ಸುರಿದ ಮಳೆ ಮಧ್ಯಾಹ್ನದ ಬಳಿಕ ಬಿರುಸು ಕಳೆದುಕೊಂಡಿತ್ತು.

ಬಂಟ್ವಾಳ,ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಧ್ಯಾಹ್ನದವರೆಗೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ವಾಡಿಕೆಯಂತೆ ದ.ಕ. ಜಿಲ್ಲೆಯಲ್ಲಿ ವಾರ್ಷಿಕ 3900 ಮಿ.ಮೀ. ಮಳೆಯಾಗುತ್ತದೆ. ಜನವರಿಯಿಂದ ಜುಲೈವರೆಗೆ ದ.ಕ. ಜಿಲ್ಲೆಯಲ್ಲಿ ಸಾಮಾನ್ಯ ವಾಗಿ 2390 ಮಿ.ಮೀ.ನಷ್ಟು ವಾಡಿಕೆಯ ಮಳೆಯಾಗುತ್ತದೆ. ಕಳೆದ ಬಾರಿ (2018) ಜನವರಿಯಿಂದ ಜುಲೈವರೆಗೆ 2530 ಮಿ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ಸುರಿದ ಮಳೆ ಪ್ರಮಾಣ 934 ಮಿ.ಮೀ.

ಒಂದೆಡೆ ಮಳೆಯ ಕೊರತೆಯಿಂದಾಗಿ ಕೃಷಿಕರು, ಮೀನುಗಾರರು ಸೇರಿದಂತೆ ಜನಸಾಮಾನ್ಯರೂ ಕಂಗಾಲಾಗಿದ್ದರೆ, ಮತ್ತೊಂದೆಡೆ ಆಗೊಮ್ಮೆ ಈಗೊಮ್ಮೆ ಎಂಬಂತೆ ದಿಢೀರನೆ ಧಾರಾಕಾರವಾಗಿ ಸುರಿವ ಮಳೆಯು ಕೂಡಾ ನಗರದ ಸುತ್ತಮುತ ಸೃಷ್ಟಿಸುವ ಕೃತಕ ನೆರೆ ಭೀತಿಯನ್ನು ಹುಟ್ಟಿಸುತ್ತಿದೆ. ನಗರದ ಹಲವೆಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು, ಅಸಮರ್ಪಕ ಮಳೆ ನೀರು ಹರಿದುಹೋಗುವ ಚರಂಡಿ ವ್ಯವಸ್ತೆ ಯಿಂದಾಗಿ, ಗಂಟೆಗಟ್ಟಲೆ ಧಾರಾಕಾರ ಮಳೆ ಸುರಿದರೆ (2018ರ ಮೇ 29ರಂದು ಸುರಿದ ಮಹಾ ಮಳೆಯಂತೆ) ಸೃಷ್ಟಿಯಾಗಬಹುದಾದ ಅಪಾಯಗಳನ್ನು ಮೆಲುಕು ಹಾಕುವಂತಾಗಿದೆ.

ಈ ನಡುವೆ, ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಜಿಲ್ಲಾಡಳಿತ ಸಕ್ರಿಯಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News