ನಿರುದ್ಯೋಗದ ಅಂಕಿಅಂಶಗಳು ಸೋರಿಕೆಯಾಗಿತ್ತು: ಒಪ್ಪಿಕೊಂಡ ಕೇಂದ್ರ ಸರಕಾರ

Update: 2019-07-18 14:18 GMT

ಹೊಸದಿಲ್ಲಿ,ಜು.18: ನಿರುದ್ಯೋಗ ಕುರಿತು ಅಂಕಿಸಂಖ್ಯೆಗಳ ಮಾಹಿತಿ ಸೋರಿಕೆಯಾಗಿದ್ದನ್ನು ಗುರುವಾರ ರಾಜ್ಯಸಭೆಯಲ್ಲಿ ಒಪ್ಪಿಕೊಂಡ ಸರಕಾರವು,ಇದರ ಹಿಂದೆ ಯಾರ ಕೈವಾಡವಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದೆ.

ಪ್ರಶ್ನೆವೇಳೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಯೋಜನಾ ಮತ್ತು ಅಂಕಿಸಂಖ್ಯೆಗಳ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು, ಸೋರಿಕೆಯು ಗಂಭೀರ ವಿಷಯವಾಗಿದೆ ಎಂದು ಬಣ್ಣಿಸಿದರು.2019, ಮೇ 30ರಂದು ಬಿಡುಗಡೆಯಾಗಬೇಕಿದ್ದ ನಿರುದ್ಯೋಗ ಅಂಕಿಸಂಖ್ಯೆಗಳು ಅದಕ್ಕೂ ಮೊದಲೇ ಸೋರಿಕೆಯಾಗಿದ್ದವು. ಇದರ ಹಿಂದೆ ಯಾರದೋ ಅಜೆಂಡಾ ಇದ್ದಿರಬಹುದು. ಇದರ ಹಿಂದೆ ಯಾರ ಕೈವಾಡವಿತ್ತು ಎನ್ನುವುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.

ನಿರುದ್ಯೋಗ ದರವನ್ನು ತಿಳಿದುಕೊಳ್ಳುವ ವಿಧಾನವನ್ನು ಸರಕಾರವು ಬದಲಿಸಿದೆ. ಈ ಮೊದಲಿನ ಐದು ವರ್ಷಗಳಿಗೆ ಸಮೀಕ್ಷೆಗಳ ಬದಲು ಈಗ ತ್ರೈಮಾಸಿಕ ದತ್ತಾಂಶವನ್ನು ಆಧರಿಸಿ ಪ್ರತಿವರ್ಷ ನಿಯತಕಾಲಿಕ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

  ವಿಧಾನದಲ್ಲಿ ಬದಲಾವಣೆಗಳು ಮತ್ತು ತಂತ್ರಜ್ಞಾನ ಬಳಕೆಯು ರಾಷ್ಟ್ರೀಯ ಮಾದರಿ ಸರ್ವೆ ಸಂಸ್ಥೆ (ಎನ್‌ಎಸ್‌ಎಸ್‌ಒ)ಯ ಹಿಂದಿನ ಸಮೀಕ್ಷೆಗಳಲ್ಲಿನ ವ್ಯತ್ಯಾಸಕ್ಕೆ ಕಾರಣ ಎಂದ ಅವರು, ಸಮೀಕ್ಷೆಯು ಐದು ವರ್ಷಗಳಿಗೆ ನಡೆದಿದ್ದರೆ 2.2 ನಿರುದ್ಯೋಗ ದರಕ್ಕೆ ಮತ್ತು ಎನ್‌ಎಸ್‌ಎಸ್‌ಒದ ಈ ಹಿಂದಿನ ಸಮೀಕ್ಷೆಗಳಿಗೆ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ, ಆದರೆ ವಿಧಾನ ಬದಲಾವಣೆಯಿಂದಾಗಿ ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಕಾರ್ಮಿಕ ಉದ್ಯೋಗ ಮತ್ತು ನಿರುದ್ಯೋಗ ಸಮೀಕ್ಷೆಗಾಗಿ ನೂತನ ವಿಧಾನವು ಹಿಂದಿನ ಪದ್ಧತಿಗಳಿಗಿಂತ ಭಿನ್ನವಾಗಿದೆ. ಸೇಬನ್ನು ಕಿತ್ತಳೆಯೊಂದಿಗೆ ಹೋಲಿಸುವಂತಿಲ್ಲ ಎಂದರು.

 ನೂತನ ವಿಧಾನವು ತ್ರೈಮಾಸಿಕ ಸಮೀಕ್ಷೆಗಳ ಆಧಾರದ ವಾರ್ಷಿಕ ಪದ್ಧತಿಯಾಗಿದೆ. ಮುಂದಿನ ವರ್ಷದ ಅಂಕಿಸಂಖ್ಯೆಗಳು ಹೊರಗೆ ಬಿದ್ದಾಗ ಮಾತ್ರ ಏಕೈಕ ಹೋಲಿಕೆ ಸಾಧ್ಯವಾಗುತ್ತದೆ. ಸದ್ಯಕ್ಕೆ ನಿರುದ್ಯೋಗ ದರವನ್ನು ಶೇ.6.1ಕ್ಕೆ ಹೋಲಿಸಲಾಗಿದೆ ಮತ್ತು ವಾರ್ಷಿಕ ದತ್ತಾಂಶವನ್ನು ಐದು ವರ್ಷಗಳ ಅಂಕಿಸಂಖ್ಯೆಗಳಿಗೆ ಹೋಲಿಸುವಂತಿಲ್ಲ ಎಂದ ಸಿಂಗ್,ಸರಕಾರವು ನಿರುದ್ಯೋಗವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಮತ್ತು ನಿರುದ್ಯೋಗವನ್ನು ನಿವಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News