ಪ್ರಶ್ನೆಗೆ ಉತ್ತರಿಸಿ, ಇಲ್ಲವೇ ನಿಷೇಧ ಎದುರಿಸಿ: ‘ಟಿಕ್-ಟಾಕ್’, ‘ಹಲೋ’ಗೆ ಕೇಂದ್ರ ಎಚ್ಚರಿಕೆ

Update: 2019-07-18 14:21 GMT

ಹೊಸದಿಲ್ಲಿ, ಜು. 18: ತನ್ನ 21 ಪ್ರಶ್ನೆಗಳ ಸೆಟ್‌ಗೆ ಜುಲೈ 22ರ ಒಳಗೆ ಸೂಕ್ತ ಪ್ರತ್ಯುತ್ತರ ನೀಡದೇ ಇದ್ದರೆ ಆ್ಯಪ್‌ಗಳನ್ನು ನಿಷೇಧಿಸಲಾಗುವುದು ಎಂದು ಎಚ್ಚರಿಸಿ ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟಿಕ್-ಟಾಕ್’ ಹಾಗೂ ‘ಹಲೋ’ಗೆ ನೋಟಿಸು ಜಾರಿ ಮಾಡಿದೆ.

ಈ ಎರಡು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂದು ಆರೆಸ್ಸೆಸ್ ನ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್ ಪ್ರಧಾನ ನರೇಂದ್ರ ಮೋದಿ ಅವರಿಗೆ ದೂರು ನೀಡಿದ ಬಳಿಕ ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಈ ವೇದಿಕೆಗಳು ದೇಶ ವಿರೋಧಿ ಚಟುವಟಿಕೆಗಳ ಜಾಲವಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆಯನ್ನು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ ಟಿಕ್‌ ಟಾಕ್ ಹಾಗೂ ಹಲೋ ಅಲ್ಲಿ ಕೇಳಿದೆ. ಅಲ್ಲದೆ, ಭಾರತೀಯ ಬಳಕೆದಾರರ ದತ್ತಾಂಶವನ್ನು ಇತರ ಯಾವುದೇ ಸರಕಾರಕ್ಕಾಗಲಿ, ಮೂರನೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಗಳಿಗಾಗಲಿ ವರ್ಗಾವಣೆ ಮಾಡುತ್ತಿಲ್ಲ ಎಂದು ಸೂಚಿಸಿದೆ.

ಅಲ್ಲದೆ, ಭವಿಷ್ಯದಲ್ಲಿ ಕೂಡ ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡುವಂತೆ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ ನಿರ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ನಕಲಿ ಸುದ್ದಿಗಳ ಪರಿಶೀಲನೆ ಹಾಗೂ ಅಂತಹ ಸುದ್ದಿಗಳ ಬಗ್ಗೆ ಭಾರತೀಯ ಕಾನೂನು ಅಡಿಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೂಡ ಅದು ಕೋರಿದೆ. ಸಮಾಜಿಕ ಜಾಲ ತಾಣಗಳಲ್ಲಿ 11 ಸಾವಿರ ತಿರುಚಿದ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಲು ಇತರ ಸಾಮಾಜಿಕ ಮಾದ್ಯಮ ವೇದಿಕೆಗಳಿಗೆ ದೊಡ್ಡ ಮೊತ್ತ ಪಾವತಿಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸುವಂತೆ ಕೂಡ ‘ಹಲೋ’ಗೆ ಸಚಿವಾಲಯ ಸೂಚಿಸಿದೆ. ಭಾರತದಲ್ಲಿ 18 ವರ್ಷಕ್ಕಿಂತ ಕೆಳಗಿನವರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಮಕ್ಕಳ ಖಾಸಗಿತನದ ಉಲ್ಲಂಘನೆ ಹಾಗೂ ಈ ಆ್ಯಪ್ ಬಳಸಲು ಕಂಪೆನಿ ಕನಿಷ್ಠ 13 ವರ್ಷ ನಿಗದಿಗೊಳಿಸಿರುವುದರ ಬಗ್ಗೆ ಸಚಿವಾಲಯ ಪ್ರಶ್ನೆ ಎತ್ತಿದೆ.

 ಕೇಂದ್ರ ಸರಕಾರ ನಿಷೇಧ ವಿಧಿಸಲಾಗುವುದು ಎಂದು ಹೇಳಿದ ಬಳಿಕ ಟಿಕ್-ಟಾಕ್ ಹಾಗೂ ಹಲೋ ಪತ್ರಿಕಾ ಹೇಳಿಕೆ ನೀಡಿ, ಸ್ಥಳೀಯ ಸಮುದಾಯದ ಬೆಂಬಲ ಇಲ್ಲದಿದ್ದರೆ, ನಾವು ಭಾರತದಲ್ಲಿ ನಿರಂತರ ಯಶಸ್ವಿಯಾಗಲು ಸಾಧ್ಯವಿರಲಿಲ್ಲ ಎಂದಿದೆ. ನಾವು ಈ ಸಮುದಾಯದ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಬಾಧ್ಯತೆಯನ್ನು ಮುಟ್ಟಲು ನಾವು ಸರಕಾರದ ಜೊತೆ ಸೇರಿ ಕಾರ್ಯ ನಿರ್ವಹಿಸುವ ಈ ಅವಕಾಶವನ್ನು ಸ್ವಾಗತಿಸುತ್ತೇವೆ ಎಂದು ಟಿಕ್-ಟಾಕ್ ಹಾಗೂ ಹಲೋ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News