1923ರಲ್ಲಿ ನೆಹರುರನ್ನು ಬಂಧನದಲ್ಲಿಟ್ಟಿದ್ದ ಪಂಜಾಬಿನ ಜೈಲುಕೋಣೆ ಮಳೆಗೆ ಕುಸಿತ

Update: 2019-07-18 14:56 GMT

ಜೈತು,ಜು.18: ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ ನೆಹರು ಮತ್ತು ಇತರ ಇಬ್ಬರು ಕಾಂಗ್ರೆಸ್ ನಾಯಕರನ್ನು 1923ರಲ್ಲಿ ಬಂಧನದಲ್ಲಿರಿಸಿದ್ದ ಪಂಜಾಬಿನ ಫರೀದಕೋಟ್ ಜಿಲ್ಲೆಯ ಜೈತು ಪಟ್ಟಣದಲ್ಲಿಯ ಜೈಲಿನ ಕೋಣೆ ಬುಧವಾರ ನಿರಂತರ ಮಳೆಯಿಂದಾಗಿ ಕುಸಿದು ಬಿದ್ದಿದೆ.

ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಆಗಿನ ಸಂಸ್ಥಾನ ನಭಾಕ್ಕೆ ತಮ್ಮ ಪ್ರವೇಶವನ್ನು ನಿಷೇಧಿಸಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ನೆಹರು ಹಾಗೂ ಅವರ ಸಹಚರರಾಗಿದ್ದ ಕೆ.ಸಂತಾನಂ ಮತ್ತು ಎ.ಟಿ.ಗಿದ್ವಾನಿ ಅವರನ್ನು 1923,ಸೆ.22ರಂದು ಬಂಧಿಸಿ ಈ ಜೈಲು ಕೋಣೆಯಲ್ಲಿಡಲಾಗಿತ್ತು ಎಂದು ಫರೀದಕೋಟ್ ಎಸ್‌ಎಸ್‌ಪಿ ರಾಜಬಚನ್ ಸಿಂಗ್ ಸಿಂಧು ಅವರು ತಿಳಿಸಿದರು.

ಬ್ರಿಟಿಷರ ವಿರುದ್ಧ ಅಕಾಲಿಗಳು ಆರಂಭಿಸಿದ್ದ ‘ಜೈತು ಕಾ ಮೋರ್ಚಾ ’ದಲ್ಲಿ ಭಾಗವಹಿಸಲು ನೆಹರು ಅವರು ಇಬ್ಬರು ಕಾಂಗ್ರೆಸ್ ನಾಯಕರೊಂದಿಗೆ ಜೈತುಗೆ ಆಗಮಿಸಿದ್ದರು.

ಜೈಲಿನ ಕೋಣೆ ಶಿಥಿಲಗೊಂಡಿತ್ತು ಮತ್ತು ಕಳೆದ ಹಲವಾರು ವರ್ಷಗಳಲ್ಲಿ ಅದರ ರಕ್ಷಣೆಗೆ ಯಾವುದೇ ಕ್ರಮವನ್ನು ಕೈಗೊಂಡಿರಲಾಗಿರಲಿಲ್ಲ ಎಂದು ಸಂಧು ತಿಳಿಸಿದರು.

ಒಂದು ದಿನದ ಮಟ್ಟಿಗೆ ಜೈತು ಜೈಲಿನಲ್ಲಿದ್ದ ಈ ಕಾಂಗ್ರೆಸ್ ನಾಯಕರನ್ನು ಬಳಿಕ ನಭಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. 1923,ಅ.3ರಂದು ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

2008,ಸೆ.23ರಂದು ಪಂಜಾಬ್ ಪ್ರವಾಸದಲ್ಲಿದ್ದ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜೈತು ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಈ ಜೈಲು ಕೋಣೆಗೆ ಭೇಟಿ ನೀಡಿದ್ದರು.

ಆಗಿನ ಕೇಂದ್ರದ ಕಾಂಗ್ರೆಸ್ ಸರಕಾರವು ಈ ಕೋಣೆಯ ನಿರ್ವಹಣೆಗಾಗಿ 65 ಲ.ರೂ.ಗಳನ್ನು ಮಂಜುರು ಮಾಡಿತ್ತು ಎಂದು ಪಂಜಾಬ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪವನ್ ಗೋಯಲ್ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News