ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ದೂರು ರಾಜಕೀಯ ಉದ್ದೇಶ ಹೊಂದಿತ್ತು: ಅಮಿತ್ ಶಾ

Update: 2019-07-18 17:22 GMT

ಹೊಸದಿಲ್ಲಿ, ಜು.18: ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ವಿರುದ್ಧ ನೀಡಲಾಗಿದ್ದ ದೂರು ರಾಜಕೀಯ ಉದ್ದೇಶದಿಂದ ಕೂಡಿತ್ತು ಮತ್ತು ಪ್ರಕರಣದಲ್ಲಿ ಸಾಕ್ಷಿಯ ಕೊರತೆಯಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀಡುವ ಮಸೂದೆಯ ಬಗ್ಗೆ ಚರ್ಚೆಯ ವೇಳೆ ಮಾತನಾಡಿದ ಶಾ, ಈ ಹೇಳಿಕೆಯನ್ನು ನೀಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಕಾಯ್ದೆ, 2019ನ್ನು ರಾಜ್ಯಸಭೆ ಬುಧವಾರ ಧ್ವನಿಮತವಿಲ್ಲದೆ ಅವಿರೋಧವಾಗಿ ಅಂಗೀಕರಿಸಿತ್ತು.

ಸಂಜೋತಾ ಪ್ರಕರಣದಲ್ಲಿ ಖುಲಾಸೆಗೊಂಡವರ ವಿರುದ್ಧ ಮೇಲ್ಮನವಿ ಸಲ್ಲಿಸದಿರುವ ಸರಕಾರದ ನಿರ್ಧಾರದ ಸಮರ್ಥನೆಯಲ್ಲಿ ಮಾತನಾಡಿದ ಶಾ, ಈ ಪ್ರಕರಣದ ದೂರು ದಾಖಲಿಸುವಲ್ಲಿ ರಾಜಕೀಯ ಉದ್ದೇಶವಿತ್ತು ಎಂದು ಆರೋಪಿಸಿದ್ದಾರೆ. ಅಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಾಣ್ ಮತ್ತು ರಜಿಂದರ್ ಚೌಧರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಮಾರ್ಚ್ 20ರಂದು ನಿರ್ದೋಷಿಗಳು ಎಂದು ಘೋಷಿಸಿ ಖುಲಾಸೆಗೊಳಿಸಿತ್ತು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಓಡಾಡುವ ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ 2007ರ ಫೆಬ್ರವರಿ 18ರಂದು ಸ್ಫೋಟ ನಡೆದಿತ್ತು.

ಈ ಘಟನೆಯಲ್ಲಿ 10 ಭಾರತೀಯರೂ ಸೇರಿ ಒಟ್ಟು 68 ಮಂದಿ ಸಾವನ್ನಪ್ಪಿದ್ದರು. ಈ ಸ್ಫೋಟವನ್ನು ಪಾಕಿಸ್ತಾನಿ ಮುಸ್ಲಿಮರನ್ನು ಗುರಿಯಾಗಿಸಿ ನಡೆಸಲಾಗಿದೆ ಎಂದು ಎನ್‌ಐಎ ತನ್ನ ದೋಷಾರೋಪಣೆಯಲ್ಲಿ ತಿಳಿಸಿತ್ತು. ಆದರೆ, ಸಂಸ್ಥೆ ಒದಗಿಸಿದ ಸಾಕ್ಷಿಗಳಲ್ಲಿ ಸಾಮ್ಯತೆಯ ಕೊರತೆಯಿದೆ ಎಂದು ನ್ಯಾಯಾಲಯ ತಿಳಿಸಿತ್ತು.

“ಈ ಪ್ರಕರಣವನ್ನು ನಿರ್ದಿಷ್ಟ ಧರ್ಮಕ್ಕೆ ಸಂಪರ್ಕಿಸುವ ಉದ್ದೇಶದಿಂದ ದೂರು ದಾಖಲಿಸಲಾಗಿತ್ತು. ಅಪರಾಧಿಗಳನ್ನು ಬಿಡುಗಡೆ ಮಾಡಿ ಹೊಸ ಜನರನ್ನು ಬಂಧಸಲಾಗಿತ್ತು. ಅವರಿಗೆ ಶಿಕ್ಷೆಯಾಗಲು ಹೇಗೆ ಸಾಧ್ಯ?, ಅವರ ವಿರುದ್ಧ ಸಾಕ್ಷಿಯೇ ಇಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗದಿರಲು ಯಾರು ಹೊಣೆ?” ಎಂದು ಶಾ ಪ್ರಶ್ನಿಸಿದ್ದಾರೆ.

ಶಾ ಮಾತಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಅಭಿಶೇಕ್ ಮನು ಸಿಂಘ್ವಿ, ಸಂಜೋತಾ ಪ್ರಕರಣದ ಸರಿಯಾದ ತನಿಖೆ ನಡೆಸುವಲ್ಲಿ ಎನ್‌ಐಎ ವಿಫಲವಾಗಿದೆ. ರಾಷ್ಟ್ರದ ಪ್ರಮುಖ ತನಿಖಾ ಸಂಸ್ಥೆಯಾದರೂ ಅದರಲ್ಲಿ ಶಿಕ್ಷೆಗಳಾಗಿರುವ ಪ್ರಕರಣಗಳು ಬಹಳ ಕಡಿಮೆ. ತನಿಖಾ ಸಂಸ್ಥೆ ಅತ್ಯುತ್ತಮ ಸಾಕ್ಷಿಯನ್ನು ತಡೆಹಿಡಿದಿತ್ತು ಮತ್ತು ಕೆಲವೊಂದು ಸ್ವತಂತ್ರ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲೇ ಇಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಬೆಟ್ಟು ಮಾಡಿದ್ದರು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News