ಕೇರಳ: ಭಾರೀ ಮಳೆಯ ಮುನ್ಸೂಚನೆ: ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಸೂಚನೆ

Update: 2019-07-18 17:49 GMT

ತಿರುವನಂತಪುರಂ, ಜು.18: ಮುಂದಿನ ಕೆಲ ದಿನಗಳಲ್ಲಿ ಮುಂಗಾರು ಮಳೆ ಬಿರುಸು ಪಡೆಯಲಿದ್ದು ಕೇರಳದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ.

ಈ ವರ್ಷದ ಮುಂಗಾರು ಮಳೆ ದುರ್ಬಲವಾಗಿದ್ದು, ಕೇರಳದಲ್ಲಿ ಜುಲೈ 18ರವರೆಗಿನ ಅವಧಿಯಲ್ಲಿ ಶೇ.48ರಷ್ಟು ಮಳೆ ಕೊರತೆ ದಾಖಲಾಗಿದೆ. ಆದರೆ ಮುಂದಿನ ಕೆಲ ದಿನಗಳಲ್ಲಿ ಮುಂಗಾರು ಮಳೆ ಬಿರುಸಾಗಲಿರುವ ಸೂಚನೆಯ ಹಿನ್ನೆಲೆಯಲ್ಲಿ ಜುಲೈ 18ರಿಂದ 20ರವರೆಗೆ ಇಡುಕ್ಕಿ ಜಿಲ್ಲೆಯಲ್ಲಿ, ಪಟ್ಟಣಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಜುಲೈ 19ರಂದು, ಎರ್ನಾಕುಳಂ ಜಿಲ್ಲೆಯಲ್ಲಿ ಜುಲೈ 20ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಲಪ್ಪುರಂ ಜಿಲ್ಲೆಯಲ್ಲಿ ಜುಲೈ 18ರಂದು ಭಾರೀ ಮಳೆಯಾಗುವ ಮುನ್ಸೂಚನೆ ದೊರೆತ ಕಾರಣ ರೆಡ್ ಅಲರ್ಟ್ ಸೂಚನೆ ನೀಡಲಾಗಿತ್ತು. ಇತರ ಜಿಲ್ಲೆಗಳಲ್ಲೂ ಮಳೆಯಾಗಲಿದೆ, ಆದರೆ ರೆಡ್ ಅಲರ್ಟ್‌ನ ಅಗತ್ಯವಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ತಕ್ಷಣವೇ ತಗ್ಗುಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ವಾಯುವ್ಯ ದಿಕ್ಕಿನಿಂದ ಗಂಟೆಗೆ ಸುಮಾರು 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಕೇರಳದಲ್ಲಿ ಸಾಮಾನ್ಯವಾಗಿ ಜೂನ್ 1ರಿಂದ ಜುಲೈ 18ರವರೆಗಿನ ಅವಧಿಯಲ್ಲಿ 1085.1 ಮಿಮೀ ಮಳೆಯಾಗುತ್ತದೆ. ಆದರೆ ಈ ಬಾರಿ ಕೇವಲ 568.7 ಮಿಮೀ ಮಳೆಯಾಗಿದ್ದು ಇಡುಕಿ ಮತ್ತು ಎಡಮಲಯಾರ್ ಅಣೆಕಟ್ಟು ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಮನಾರ್ಹವಾಗಿ ಕುಸಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News