ಮಣಿಪುರ: ನಕಲಿ ಎನ್‌ಕೌಂಟರ್ ಪ್ರಕರಣ; ನ್ಯಾಯಪೀಠ ಪುನಾರಚನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

Update: 2019-07-18 18:08 GMT

ಇಂಫಾಲ, ಜು. 18: ಮಣಿಪುರದಲ್ಲಿ ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್ ಹಾಗೂ ಪೊಲೀಸ್ ಅಧಿಕಾರಿಗಳು ನಡೆಸಿದರೆನ್ನಲಾದ ಕಾನೂನು ಬಾಹಿರ ಹತ್ಯೆ ಪ್ರಕರಣಗಳ ವಿಚಾರಣೆಗೆ ಪೀಠವನ್ನು ಪುನಾರಚಿಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠದ ನ್ಯಾಯಮೂರ್ತಿ ಎಂ.ಬಿ. ಲೋಕುರ್ ನಿವೃತ್ತರಾದ ಹಿನ್ನೆಲೆಯಲ್ಲಿ ಪೀಠವನ್ನು ಪುನಾರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠ ಹೇಳಿದೆ. ಲೋಕೂರ್ ಅವರು ನಿವೃತ್ತರಾದ ಬಳಿಕ ಪ್ರಕರಣದ ವಿಚಾರಣೆಯನ್ನು ಇದುವರೆಗೆ ನಡೆಸಿಲ್ಲ ಎಂದು ದೂರುದಾರ ಪರ ನ್ಯಾಯವಾದಿ ಕಾಲಿನ್ ಗೊನ್ಸ್ವಾಲಿಸ್ ಹೇಳಿದ್ದಾರೆ. ಲೋಕೂರ್ ಅವರೊಂದಿಗೆ ಇಂತಹ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಪೀಠದ ಮುಂದೆ ನಾನು ಈ ಪ್ರಕರಣವನ್ನು ತಂದೆ. ಆದರೆ, ಅವರು ಮುಖ್ಯ ನ್ಯಾಯಮೂರ್ತಿ ಪೀಠವನ್ನು ಸಂಪರ್ಕಿಸುವಂತೆ ಸೂಚಿಸಿದರು ಎಂದು ಅವರು ತಿಳಿಸಿದ್ದಾರೆ.

ಮಣಿಪುರದಲ್ಲಿ 2000ದಿಂದ 2012ರ ವರೆಗೆ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ನಡೆಸಿದ್ದಾರೆ ಎನ್ನಲಾದ 1,528 ಹತ್ಯೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ 2017 ಜುಲೈಯಲ್ಲಿ ಸಿಬಿಐಗೆ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News