ಉದ್ಯೋಗಕ್ಕಾಗಿ ಕುವೈತ್‌ ಗೆ ತೆರಳಿ ಸಂಕಷ್ಟ : ಕರಾವಳಿಯ 19 ಮಂದಿ ವಾಪಸ್

Update: 2019-07-20 09:02 GMT

ಮಂಗಳೂರು, ಜು.19: ಕುವೈತ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ 34 ಕರಾವಳಿ ಯುವಕರ ಪೈಕಿ 19 ಮಂದಿ ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಮರಳಿದ್ದಾರೆ. ಕುವೈತ್‌ನಲ್ಲಿ ಉದ್ಯೋಗ ಸಿಗದೆ ಕೊನೆಗೆ ಊಟಕ್ಕೂ ಪರದಾಡುವ ಪರಿಸ್ಥಿತಿ ತಲುಪಿದ್ದ ಈ ಯುವಕರು ಇದೀಗ ಖುಷಿಯಿಂದ ತಾಯ್ನೆಲಕ್ಕೆ ಕಾಲಿಟ್ಟಿದ್ದಾರೆ.

ಈ ಯುವಕರನ್ನು ಬುಧವಾರ ರಾತ್ರಿ ಕುವೈತ್‌ನಿಂದ ವಿಮಾನ ಹತ್ತಿಸಲಾಗಿತ್ತು. ಗುರುವಾರ ಮಧ್ಯಾಹ್ನ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದರು. ಅಲ್ಲಿಂದ ಬಸ್ ಮೂಲಕ ಶುಕ್ರವಾರ ನಸುಕಿನಜಾವ ಉಡುಪಿ, ಮಂಗಳೂರಿಗೆ ಆಗಮಿಸಿದ್ದಾರೆ. ಇವರನ್ನು ನಗರದ ಪಂಪ್‌ವೆಲ್ ಬಳಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರು ಮತ್ತಿತರರು ಸ್ವಾಗತಿಸಿದರು.

ಟಿಕೆಟ್ ವೆಚ್ಚ ಭರಿಸಿದ್ದ ಶಾಸಕ: ಈ 19 ಸಂತ್ರಸ್ತರ ವಿಮಾನ ಟಿಕೆಟ್ ವೆಚ್ಚವನ್ನು ಶಾಸಕ ವೇದವ್ಯಾಸ ಕಾಮತ್ ಭರಿಸಿದ್ದರು. ಅಲ್ಲದೆ, ಮುಂಬೈನಿಂದ ಬಸ್ ವ್ಯವಸ್ಥೆಯನ್ನೂ ಮಾಡಿದ್ದರು. ಹೀಗಾಗಿ ವಿದೇಶದಲ್ಲಿ ಪರದಾಡುತ್ತಿದ್ದವರು ಕೊನೆಗೂ ತಾಯ್ನೆಲವನ್ನು ತಲುಪಿದ ಖುಷಿಯಲ್ಲಿದ್ದಾರೆ.

ಈ ಸಂದರ್ಭ ಮಾತನಾಡಿದ ಸಂತ್ರಸ್ತ ಯುವಕರು ತಮಗೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುವೈತ್‌ನಲ್ಲಿರುವ ವಿವಿಧ ಸಂಘಟನೆಗಳ ಮುಖಂಡರಾದ ಮೋಹನ್‌ದಾಸ್ ಕಾಮತ್, ರಾಜ್ ಭಂಡಾರಿ, ವಿಜಯ್ ಫರ್ನಾಂಡಿಸ್, ಅಹ್ಮದ್ ಬಾವ, ಮಾಧವ ನಾಯಕ್, ತುಳು ಕೂಟದವರು ತುಂಬ ಸಹಾಯ ಮಾಡಿದ್ದಾರೆ. ಅವರ ಶ್ರಮದಿಂದ ಇಲ್ಲಿಗೆ ಬಂದಿದ್ದೇವೆ. ಬೇಸರ ಎಂದರೆ ಇನ್ನೂ 11 ಮಂದಿ ಕುವೈತ್‌ನಲ್ಲೇ ಕಷ್ಟದಲ್ಲಿದ್ದಾರೆ. ಅವರಲ್ಲಿ ಹಲವರಿಗೆ ಕಂಪೆನಿ ದಂಡ ಶುಲ್ಕ ಹಾಕಿದ್ದು, ಅದನ್ನು ಕಟ್ಟುವ ವ್ಯವಸ್ಥೆ ಆಗಬೇಕಿದೆ ಎಂದರು.

ಕುವೈತ್‌ನ ಕಂಪೆನಿ ಉದ್ಯೋಗವನ್ನೂ ನೀಡದೆ ಕೊನೆಗೆ ಊಟದ ವ್ಯವಸ್ಥೆಯನ್ನೂ ಬಂದ್ ಮಾಡಿದಾಗ ಕಂಗೆಟ್ಟಿದ್ದೆವು. ನಮ್ಮ ಸಂಕಷ್ಟಗಳ ಕುರಿತು ವೀಡಿಯೊ ಮಾಡಿದ ಬಳಿಕ ಅದು ವೈರಲ್ ಆಗಿ ಎಲ್ಲರೂ ಸಹಾಯಕ್ಕೆ ಬಂದಿದ್ದರು. ಶಾಸಕ ವೇದವ್ಯಾಸ ಕಾಮತ್ ಮುತುವರ್ಜಿ ವಹಿಸಿ ವಿಮಾನ ಟಿಕೆಟ್, ಬಸ್ ವ್ಯವಸ್ಥೆ ಮಾಡಿದ್ದರಿಂದ ಇಲ್ಲಿಗೆ ಬರುವಂತಾಯ್ತು ಎಂದು ಸ್ಮರಿಸಿದರು.

ಕುವೈತ್‌ನಲ್ಲಿ ಒಳ್ಳೆಯ ಉದ್ಯೋಗ ಸಿಕ್ಕೀತೆಂಬ ಕನಸಿನಿಂದ ಹೋಗಿದ್ದ ನಮಗೆ ಭ್ರಮನಿರಸನವಾಗಿದೆ. ಮುಂದಿನ ಉದ್ಯೋಗದ ಕುರಿತು ಇನ್ನಷ್ಟೇ ಯೋಚಿಸಬೇಕಿದೆ ಎಂದಿದ್ದಾರೆ.

ಇನ್ನೂ 11 ಮಂದಿ ಬಾಕಿ: ಕುವೈತ್‌ನಿಂದ ಮೂರು ಮಂದಿಯ ಇನ್ನೊಂದು ಗುಂಪು ಗುರುವಾರ ರಾತ್ರಿ ಕುವೈತ್‌ನಿಂದ ಹೊರಟಿದ್ದು, ಮುಂಬೈ ತಲುಪಿದ್ದಾರೆ. ಅಲ್ಲಿಂದ ತಾಯ್ನಾಡಿಗೆ ಮರಳಲಿದ್ದಾರೆ. ಉಳಿದಂತೆ ಕರಾವಳಿಯ ಇನ್ನೂ 11 ಮಂದಿ ಕುವೈತ್‌ನಲ್ಲೇ ಬಾಕಿಯಾಗಿದ್ದು, ಅಲ್ಲಿನ ದಂಡ ಶುಲ್ಕ ಕಟ್ಟುವುದು, ವಿಮಾನ ಟಿಕೆಟ್ ಸೇರಿದಂತೆ ಸರ್ವ ವ್ಯವಸ್ಥೆಯ ಬಳಿಕ ಮುಂದಿನ ಹಂತದಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂದವರು ಯಾರ್ಯಾರು?:

ಅಬೂಬಕರ್ ಸಿದ್ದೀಕ್ (ಬಜಾಲ್), ಮುಹಮ್ಮದ್ ಸುಹೈಲ್ (ಉಳ್ಳಾಲ), ನೌಫಾಲ್ ಹುಸೈನ್ (ಉಳ್ಳಾಲ), ಮುಹಮ್ಮದ್ ಶಕೀರ್ (ಉಳ್ಳಾಲ), ಅಬ್ದುಲ್ ಲತೀಫ್ (ತುಂಬೆ), ಫಯಾಝ್ (ಕುತ್ತಾರ್), ವರುಣ್ (ಆಕಾಶ್ ಭವನ), ಕಲಂದರ್ ಶಫೀಕ್ (ಮೂಡುಬಿದಿರೆ), ಜಗದೀಶ್, ಆಶೀಕ್ (ಉಡುಪಿ), ಪಾರ್ಥಿಕ್ (ಉಡುಪಿ), ಮುಹಮ್ಮದ್ ಹಸನ್ (ಕೊಲ್ನಾಡು), ಮುಹಮ್ಮದ್ ಇಸ್ಮಾಯೀಲ್ (ಕೊಲ್ನಾಡು), ಅಬ್ದುಲ್ ಮಸೀದ್ (ಕಾರ್ಕಳ), ನೌಷಾದ್ (ಮಂಜೇಶ್ವರ), ನೌಷಾದ್ (ಕೊಪ್ಪ), ರಫೀಕ್ (ಕೊಪ್ಪ), ಯಕೂಬ್ ಮುಲ್ಲಾ (ಶಿರಸಿ), ಪಾರ್ಲ್ಟ್ರಿಕ್ ಫೆರ್ನಾಂಡಿಸ್ (ಭಟ್ಕಳ) ತವರಿಗೆ ಬಂದಿಳಿದ ಸಂತ್ರಸ್ತ ಯುವಕರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News